ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ನಾಳೆ 50ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರೊಂದಿಗಿನ ಬಾಂಧವ್ಯ ಹಾಗೂ ಒಡನಾಟ ಹಂಚಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ ಮೂರೂವರೆ ದಶಕಗಳ ಕಾಲ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಒಟ್ಟಿಗೆ ಬ್ಯಾಟ್ ಬೀಸಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹವಿದ್ದು, ಹಳೆಯ ನೆನಪು ಮೆಲಕು ಹಾಕಿರುವ ಸಚಿನ್ ಅನೇಕ ಸಂಗತಿಗಳನ್ನ ಪಿಟಿಐ ಜೊತೆ ಹಂಚಿಕೊಂಡಿದ್ದಾರೆ.
![Sachin Tendulkar & Sourav Ganguly](https://etvbharatimages.akamaized.net/etvbharat/prod-images/15763982_twdfdfd.jpg)
ಸುಮಾರು ಐದು ವರ್ಷಗಳ ನಾಯಕತ್ವದ ವೇಳೆ ತಮಗೆ ಎಷ್ಟು ಸ್ವಾತಂತ್ರ್ಯ ನೀಡಿದ್ದರು ಎಂದು ಕೇಳಿರುವ ಪ್ರಶ್ನೆಗೆ, ಸೌರವ್ ಓರ್ವ ಶ್ರೇಷ್ಠ ನಾಯಕ. ತಂಡದಲ್ಲಿ ಸಮತೋಲನ ಹೇಗೆ ಸಾಧಿಸಬೇಕು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಆಟಗಾರರಿಗೆ ಎಷ್ಟು ಸ್ವಾತಂತ್ರ್ಯ ನೀಡಬೇಕು ಮತ್ತು ಎಷ್ಟು ಜವಾಬ್ದಾರಿ ನೀಡಬೇಕು ಎಂಬುದು ಕರಗತ ಮಾಡಿಕೊಂಡಿದ್ದರೂ ಎಂದು ಸಚಿನ್ ತಿಳಿಸಿದ್ದಾರೆ.
ನಮ್ಮ ಸಮಯದಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಮತ್ತು ಆಶಿಶ್ ನೆಹ್ರಾರಂತಹ ವಿಶ್ವದರ್ಜೆಯ ಆಟಗಾರರು ಸಿಕ್ಕರು. ಅವರೆಲ್ಲ ತುಂಬಾ ಪ್ರತಿಭಾವಂತರಾಗಿದ್ದರು. ಆದರೆ, ಆರಂಭದಲ್ಲಿ ಸೌರವ್ ಗಂಗೂಲಿ ನೀಡಿದ ಬೆಂಬಲದಿಂದ ಅವರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು ಎಂದರು.
1999ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾನು ನಾಯಕತ್ವ ತೊರೆಯಲು ನಿರ್ಧರಿಸಿದ್ದೆ. ಈ ವೇಳೆ, ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಉಂಟಾಗಿತ್ತು. ಆಸ್ಟ್ರೇಲಿಯಾ ಪ್ರವಾಸದ ವೇಳೆ ಸೌರವ್ ಗಂಗೂಲಿ ಅವರನ್ನ ಉಪನಾಯಕನನ್ನಾಗಿ ನೇಮಕ ಮಾಡುವಂತೆ ಸೂಚನೆ ನೀಡಿದ್ದೆನು ಎಂದರು.
ಇದನ್ನೂ ಓದಿರಿ: ಮೈ ಡಾರ್ಲಿಂಗ್' ಹುಟ್ಟುಹಬ್ಬದ ಶುಭಾಶಯ ಮಹಿ ಭಾಯ್: ಧೋನಿಗೆ ವಿಶೇಷವಾಗಿ ಶುಭ ಕೋರಿದ ಹಾರ್ದಿಕ್
ಸೌರವ್ ಗಂಗೂಲಿ ಅವರನ್ನ ನಾನು ತುಂಬಾ ಹತ್ತಿರದಿಂದ ನೋಡಿದ್ದೆ, ಅವರೊಂದಿಗೆ ಕ್ರಿಕೆಟ್ ಆಡಿರುವೆ, ಭಾರತೀಯ ಕ್ರಿಕೆಟ್ ಮುಂದಕ್ಕೆ ಕೊಂಡೊಯ್ಯಬಲ್ಲರು ಎಂಬುದು ನನಗೆ ಗೊತ್ತಿತ್ತು. ಅವರನ್ನ ನಾಯಕನನ್ನಾಗಿ ನೇಮಕ ಮಾಡಿದ ಬಳಿಕ ಹಿಂತಿರುಗಿ ನೋಡಲಿಲ್ಲ. ಅವರ ಸಾಧನೆಗಳು ನಮ್ಮ ಕಣ್ಮುಂದೆ ಇವೆ ಎಂದು ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ನಡುವಿನ ಉತ್ತಮ ಹೊಂದಾಣಿಕೆಯಿಂದ ಒಟ್ಟು 26 ಶತಕಗಳ ಜೊತೆಯಾಟವಾಡಿದ್ದೇವೆ ಮತ್ತು 21 ಇನ್ನಿಂಗ್ಸ್ ಒಟ್ಟಿಗೆ ಪ್ರಾರಂಭಿಸಿದ್ದೇವೆ ಎಂದರು.
![Sourav Ganguly](https://etvbharatimages.akamaized.net/etvbharat/prod-images/15761651_dada.jpg)
ಸೌರವ್ ಮತ್ತು ನಾನು ಪಂದ್ಯ ಗೆಲ್ಲಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೆವು. ನಾವು ಟೀಂ ಇಂಡಿಯಾ ತಂಡದಲ್ಲಿದ್ದ ವೇಳೆ ಮೊಬೈಲ್ ಫೋನ್ ಇರಲಿಲ್ಲ. ಆದರೂ ಇಬ್ಬರು ಪರಸ್ಪರ ಸಂಪರ್ಕದಲ್ಲಿರುತ್ತಿದ್ದೆವು. 1991ರ ಪ್ರವಾಸದ ವೇಳೆ ನಾವು ಒಂದೇ ಕೋಣೆಯಲ್ಲಿ ವಾಸವಾಗಿದ್ದೆವು ಎಂದು ಮೆಲಕು ಹಾಕಿದರು.
ಬಿಸಿಸಿಐ ಆಯೋಜಿಸಿದ್ದ ಜೂನಿಯರ್ ಟೂರ್ನಿಯಲ್ಲಿ ಮೊದಲ ಭೇಟಿ: ಕಾನ್ಪುರದಲ್ಲಿ ಬಿಸಿಸಿಐ ಆಯೋಜನೆ ಮಾಡಿದ್ದ ಜೂನಿಯರ್ ಟೂರ್ನಿಯಲ್ಲಿ ನಾನು ಗಂಗೂಲಿ ಮೊದಲ ಭೇಟಿ ಮಾಡಿದ್ದೆವು. ಇದಾದ ಬಳಿಕ ಇಂದೋರ್ನಲ್ಲಿ ನಡೆದ ವಾರ್ಷಿಕ ಶಿಬಿರದಲ್ಲಿ ಇಬ್ಬರೂ ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೇವೆ. ಅಲ್ಲಿಂದ ನಮ್ಮ ಸ್ನೇಹ ಪ್ರಾರಂಭವಾಯಿತು ಎಂದಿದ್ದಾರೆ.