ಮುಂಬೈ (ಮಹಾರಾಷ್ಟ್ರ): ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರೆಂದೇ ಕರೆಯಲಾಗುತ್ತದೆ. ಶತಕಗಳ ಶತಕ ಸಿಡಿಸಿದ ಏಕೈಕ ಬ್ಯಾಟರ್ ಸಚಿನ್ಗೆ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ವಿಶೇಷ ಗೌರವ ಸಲ್ಲಿಸಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಿದ್ಧತೆ ನಡೆಯುತ್ತಿದೆ. ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯದ (ನ.2) ಒಂದು ದಿನ ಮುನ್ನ ಈ ಗೌರವವನ್ನು ನೀಡಲಾಗುತ್ತಿದೆ.
ವಾಂಖೆಡೆ ಸ್ಟೇಡಿಯಂನ ಒಂದು ಸ್ಟಾಂಡ್‌ಗೆ ಈಗಾಗಲೇ ಸಚಿನ್ ಅವರ ಹೆಸರನ್ನಿಡಲಾಗಿದೆ. ಇದೀಗ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸಚಿನ್ ಸಾಧನೆಗೆ ಜೀವಮಾನದ ಪ್ರತಿಮೆ ನಿರ್ಮಿಸಿದೆ. ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸ್ವೀಕರಿಸಿರುವ ಸಚಿನ್ ಅವರ ಪ್ರತಿಮೆಯನ್ನು ನವೆಂಬರ್ 1ರಂದು ಅನಾವರಣ ಮಾಡಲಾಗುತ್ತದೆ.
ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಶುಕ್ರವಾರ ಈಟಿವಿ ಭಾರತಕ್ಕೆ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ತೆಂಡೂಲ್ಕರ್ ಅವರೇ ಉಪಸ್ಥಿತರಿರಲಿದ್ದಾರೆ. ಇತರ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 28ರಂದು ತೆಂಡೂಲ್ಕರ್ ಪ್ರತಿಮೆ ನಿರ್ಮಾಣದ ಬಗ್ಗೆ ಎಂಸಿಎ ಪ್ರಕಟಿಸಿತ್ತು. "2023ರ ಐಸಿಸಿ ವಿಶ್ವಕಪ್ ವೇಳೆ ಈ ಪ್ರತಿಮೆ ಅನಾವರಣ ಮಾಡಲಾಗುವುದು. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಹೊರಗಿರುವ ಜಾಗದಲ್ಲಿ ಅಭಿಮಾನಿಗಳಿಗೆ ವೀಕ್ಷಣೆಗೆ ಸಿಗುವಂತೆ ಪ್ರತಿಮೆ ನಿರ್ಮಿಸಲಾಗುವುದು" ಎಂದು ಅಮೋಲ್ ಕಾಳೆ ತಿಳಿಸಿದ್ದರು.
ಅಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿನ್, ನನ್ನ ವೃತ್ತಿಜೀವನ ಈ ಮೈದಾನದಿಂದ ಪ್ರಾರಂಭವಾಗಿತ್ತು. 2011ರಲ್ಲಿ ನಾವು ವಿಶ್ವಕಪ್ ಗೆದ್ದಿರುವುದು ಸ್ಮರಣೀಯ ಕ್ಷಣ. ನಾನು ಕೊನೆಯ ಪಂದ್ಯವನ್ನು 2013ರಲ್ಲಿ ಇಲ್ಲಿಯೇ ಆಡಿದ್ದೆ. ಹೆಚ್ಚಿನ ನನ್ನ ನೆನಪುಗಳು ಈ ಕ್ರೀಡಾಂಗಣದಲ್ಲಿವೆ" ಎಂದಿದ್ದರು.
ಸಚಿನ್ ತೆಂಡೂಲ್ಕರ್ ಮುಂಬೈ ಮೂಲದವರು. ಬಾಂದ್ರಾದ ಸಾಹಿತ್ಯ ಸಹವಾಸ್‌ನಲ್ಲಿ ಬೆಳೆದವರು. ಮಧ್ಯ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿದ್ದ ದಿವಂಗತ ರಮಾಕಾಂತ್ ಅಚ್ರೇಕರ್ ಅವರಿಂದ ಕ್ರಿಕೆಟ್ ಕಲಿತರು. 16ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು, ಮೂರು ಮಾದರಿಯ ಕ್ರಿಕೆಟ್ನಲ್ಲಿ 34,357 ರನ್ ಕಲೆಹಾಕಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಬ್ಬ ಆಟಗಾರ ಗಳಿಸಿದ ಅತಿ ಹೆಚ್ಚಿನ ರನ್ ದಾಖಲೆಯಾಗಿದೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ವಾರ್ನರ್ 163, ಮಾರ್ಷ್ 121 ರನ್! ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ದಾಖಲೆಯ ಜತೆಯಾಟ