ಕೇಪ್ಟೌನ್: ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಆಟಗಾರರಿಗೆ ರೂಪಾಂತರಿ ವೈರಸ್ ಒಮಿಕ್ರೋನ್ ನಿಂದ ಯಾವುದೇ ತೊಂದರೆಯಾಗದಂತಹ ಅತ್ಯುತ್ತಮವಾದ ಬಯೋಸೆಕ್ಯೂರ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದಾಗಿ ದಕ್ಷಿಣ ಆಫ್ರಿಕಾ ಸರ್ಕಾರ ಬಿಸಿಸಿಐ ಮತ್ತು ಭಾರತ ಸರ್ಕಾರಕ್ಕೆ ಭರವಸೆ ನೀಡಿದೆ.
ಪ್ರಪಂಚವನ್ನು ತಲ್ಲಣಗೊಳಿಸಿರುವ ಒಮಿಕ್ರೋನ್ ರೂಪಾಂತರಿ ವೈರಸ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಕೆಲವು ರಾಷ್ಟ್ರಗಳು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವುದಕ್ಕಾಗಿ ಈ ದೇಶದಿಂದ ಬರುವವರಿಗೆ ನಿರ್ಬಂಧ ವಿಧಿಸಿದ್ದಾರೆ. ವಿಮಾನಯಾನವನ್ನು ಕೂಡ ರದ್ದುಗೊಳಿಸಿವೆ.
ಭಾರತ 'ಎ' ತಂಡವು ಪ್ರಸ್ತುತ ಬ್ಲೋಮ್‌ಫಾಂಟೈನ್‌ನಲ್ಲಿದ್ದು, ರೂಪಾಂತರಿ ವೈರಸ್ ಭೀತಿಯ ನಡುವೆಯೂ ಮಂಗಳವಾರ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಅನ್ನು ಆಡುತ್ತಿದೆ. ಕೊನೆಯ ಟೆಸ್ಟ್ ಡಿಸೆಂಬರ್ 6 ರಂದು ಆರಂಭವಾಗಲಿದೆ.
ಇದನ್ನೂ ಓದಿ:ಪರಿಪೂರ್ಣ ಸ್ಪಿನ್ ಬೌಲರ್ ಆಗಲು ನನಗೆ ಹರ್ಭಜನ್ ಸಿಂಗ್ ಸ್ಫೂರ್ತಿ: ಆರ್. ಅಶ್ವಿನ್
ವೇಳಾಪಟ್ಟಿಯ ಪ್ರಕಾರ ಭಾರತ ಸೀನಿಯರ್ ತಂಡ ಕೂಡ ನ್ಯೂಜಿಲ್ಯಾಂಡ್ ವಿರುದ್ಧ 2ನೇ ಟೆಸ್ಟ್ ಮುಗಿಯುತ್ತಿದ್ದಂತೆ ದಕ್ಷಿಣ ಆಫ್ರಿಕಾಗೆ ತೆರಳಬೇಕಿದೆ. ಜೋಹಾನ್ಸ್ಬರ್ಗ್ನಲ್ಲಿ ಡಿಸೆಂಬರ್ 17ರಿಂದ ಟೆಸ್ಟ್ ಪಂದ್ಯದ ಮೂಲಕ ಪ್ರವಾಸವನ್ನು ಆರಂಭಿಸಬೇಕಿದೆ. ನಂತರ ಸೆಂಚುರಿಯನ್ ಮತ್ತು ಕೇಪ್ಟೌನ್ನಲ್ಲಿ ಮತ್ತೆರಡು ಟೆಸ್ಟ್, ನಂತರ ಜನವರಿ 26ರವರೆಗೆ 3 ಏಕದಿನ ಮತ್ತು 4 ಟಿ20 ಪಂದ್ಯಗಳನ್ನಾಡಲಿದೆ.
"ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಎ ವಿರುದ್ಧ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಲು ತೀರ್ಮಾನಿಸಿರುವ ನಿರ್ಧಾರವನ್ನು ದಕ್ಷಿಣ ಆಫ್ರಿಕಾ ಸರ್ಕಾರ ಸ್ವಾಗತಿಸಲು ಬಯಸುತ್ತದೆ" ಎಂದು ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಸಹಕಾರ ಇಲಾಖೆ ಸೋಮವಾರ ರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
"ಭಾರತ ರಾಷ್ಟ್ರೀಯ ತಂಡ ಕೂಡ 3 ಟೆಸ್ಟ್, 3 ಏಕದಿ ಮತ್ತು 4 ಟಿ20 ಪಂದ್ಯಗಳ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ನಮ್ಮ ಸರ್ಕಾರ ಭಾರತ ತಂಡದ ಆರೋಗ್ಯ ಮತ್ತು ಸುರಕ್ಷತೆ ಕಾಪಾಡಲು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಭಾರತ ಮತ್ತು ಭಾರತ ಎ, ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸುತ್ತ ಅತ್ಯುತ್ತಮವಾದ ಬಯೋ ಸೆಕ್ಯೂರ್ ವ್ಯವಸ್ಥೆಯನ್ನು ನಿರ್ಮಿಸಲಿದೆ" ಎಂದು ಹೇಳಿಕೆಯಲ್ಲಿ ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.
ದಕ್ಷಿಣ ಆಫ್ರಿಕಾ ಐಸಿಸಿಯಿಂದ ನಿಷೇಧಮುಕ್ತವಾಗಿ 30 ವರ್ಷಗಳಾಗಲಿದೆ. 1970ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಐಸಿಸಿ ನಿಷೇಧಿಸಿತ್ತು. ಆದರೆ 1991ರಲ್ಲಿ ನಿಷೇಧ ಮುಕ್ತ ಆಫ್ರಿಕಾ ತಂಡಕ್ಕೆ ಭಾರತ ಆತಿಥ್ಯ ನೀಡಿದ ಮೊದಲ ದೇಶವಾಗಿತ್ತು. ಇದೀಗ 30ನೇ ವಾರ್ಷಿಕೋತ್ಸವವನ್ನು ಜನವರಿ 2ರಂದು ಕೇಪ್ಟೌನ್ನಲ್ಲಿ ಆಚರಿಸಲು ಸಿಎಸ್ಎ ನಿರ್ಧರಿಸಿದೆ. ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗಳ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಕಿವೀಸ್ ಬ್ಯಾಟರ್ಸ್ ಗೆಲ್ಲುವುದಕ್ಕೆ ಪ್ರಯತ್ನಿಸದೇ, ಡ್ರಾಗೋಸ್ಕರ ಆಡಿದರು : ಗವಾಸ್ಕರ್