ಟೀಂ ಇಂಡಿಯಾದ ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್ ಅವರ ಪುತ್ರ ಹ್ಯಾರಿ ಸಿಂಗ್ ಇದೀಗ ಇಂಗ್ಲೆಂಡ್ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೋಸ್ಕರ ಪ್ರಕಟಗೊಂಡಿರುವ ತಂಡದಲ್ಲಿ ಭಾರತೀಯನ ಪುತ್ರ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 80ರ ದಶಕದಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ವೇಗದ ಬೌಲರ್ ರುದ್ರಪ್ರತಾಪ್ ಸಿಂಗ್ ಸದ್ಯ ಲಂಡನ್ನಲ್ಲಿ ವಾಸವಿದ್ದು, ಮಗ ಸಹ ಕ್ರಿಕೆಟ್‌ನಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾಗಿರುವ ಆರ್.ಪಿ.ಸಿಂಗ್ ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಕಪಿಲ್ ದೇವ್ ನಾಯಕರಾಗಿದ್ದಾಗ ಇವರು ತಂಡದ ಭಾಗವಾಗಿದ್ದರು. ಸದ್ಯ ಇಂಗ್ಲೆಂಡ್ನಲ್ಲಿ ಕ್ಲಬ್ ಕ್ರಿಕೆಟ್‌ನಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಕೆಲವೊಮ್ಮೆ ಕ್ರಿಕೆಟ್ ಕಮೆಂಟರಿಯಲ್ಲಿಯೂ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿ: 9 ವರ್ಷಗಳ ಬಳಿಕ ತಾಯಿ ಭೇಟಿ ಮಾಡಿ ಭಾವುಕನಾದ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಆಟಗಾರ!
ಆರ್.ಪಿ.ಸಿಂಗ್ ಅವರ ಮಕ್ಕಳು ಇಂಗ್ಲೆಂಡ್ನಲ್ಲಿ ಬೆಳೆದಿದ್ದು, ಮಗ ಇದೀಗ ಇಂಗ್ಲೆಂಡ್ನ ಲಂಕಾಶೈರ್ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಆರ್.ಪಿ.ಸಿಂಗ್ ಪುತ್ರಿ ಲಂಕಾಶೈರ್‌ನ 19 ವರ್ಷದೊಳಗಿನವರ ಕ್ರಿಕೆಟ್ ತಂಡ ಪ್ರತಿನಿಧಿಸಿದ್ದಾರೆ. ಆದರೆ, ಅಧ್ಯಯನದತ್ತ ಗಮನ ಹರಿಸಲು ನಿರ್ಧರಿಸಿರುವ ಅವರು ಕ್ರಿಕೆಟ್ ತೊರೆದಿದ್ದಾರೆ.
ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಚಾನ್ಸ್?: ಅಂಡರ್-19 ತಂಡದಲ್ಲಿ ಹ್ಯಾರಿ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ಕೆಲ ವರ್ಷಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ. ಓಪನರ್ ಬ್ಯಾಟರ್ ಆಗಿರುವ ಇವರು ಸ್ಪಿನ್ ಬೌಲಿಂಗ್ ಸಾಮರ್ಥ್ಯವನ್ನೂ ಹೊಂದಿದ್ದಾರೆ.