ಪುಣೆ: ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿಂದ ಆರ್ಸಿಬಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 174 ರನ್ಗಳ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಮೊದಲ ವಿಕೆಟ್ಗೆ 62 ರನ್ಗಳ ಭರ್ಜರಿ ಆರಂಭ ಪಡೆದುಕೊಂಡಿತು. ಆದರೆ 17 ರನ್ಗಳ ಅಂತರದಲ್ಲಿ 22 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 38 ರನ್ಗಳಿಸಿದ್ದ ಪ್ಲೆಸಿಸ್, 33 ಎಸೆತಗಳಲ್ಲಿ 30 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್(3) ವಿಕೆಟ್ ಕಳೆದುಕೊಂಡಿತು.
ದಿಢೀರ್ ಕುಸಿತದಿಂದ ಆಘಾತಕ್ಕೊಳಗಾಗಿದ್ದ ತಂಡವನ್ನು ಲೊಮ್ರೋರ್ ಮತ್ತು ರಜತ್ ಪಾಟೀದಾರ್ ಮೇಲೆತ್ತಿದರು. ಈ ಜೋಡಿ 4 ವಿಕೆಟ್ಗೆ 44 ರನ್ ಸೇರಿಸಿ ಚೇತರಿಕೆ ನೀಡಿತು. ಆದರೆ 21 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಾಟೀದಾರ್ರನ್ನು ಪ್ರೆಟೋರಿಯಸ್ ಪೆವಿಲಿಯನ್ಗಟ್ಟಿದರು.
ನಂತರ ಬಂದ ದಿನೇಶ್ ಕಾರ್ತಿಕ್, ಲೊಮ್ರೋರ್ ಜೊತಗೂಡಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಒಂದು ಹಂತದಲ್ಲಿ ಆರ್ಸಿಬಿ 180-190ರ ಹತ್ತಿರ ಬರಬಹುದು ಎಂದು ಊಹಿಸಲಾಗಿತ್ತು. ಆದರೆ 19ನೇ ಓವರ್ ಎಸೆದ ತೀಕ್ಷಣ ಕೇವಲ 2 ರನ್ ನೀಡಿ 27 ಎಸೆತಗಳಲ್ಲಿ 42 ರನ್ಗಳಿಸಿದ್ದ ಲೊಮ್ರೋರ್, ನಂತರದ ಎಸೆತದಲ್ಲೇ ವನಿಂಡು ಹಸರಂಗ ಮತ್ತು ಕೊನೆಯ ಎಸೆತದಲ್ಲಿ ಶಹಬಾಜ್ ವಿಕೆಟ್ ಪಡೆದು ಆರ್ಸಿಬಿ ಬೃಹತ್ ಮೊತ್ತದ ಕನಸಿಗೆ ತಣ್ಣೀರೆರಚಿದರು.
ಆದರೆ ಕೊನೆಯ ಓವರ್ನಲ್ಲಿ ದಿನೇಶ್ ಕಾರ್ತಿಕ್(26) 2 ಸಿಕ್ಸರ್ಗಳ ಸಹಿತ 16 ರನ್ ಸಿಡಿಸಿ 174 ರನ್ಗಳ ಸವಾಲಿನ ಗುರಿ ನೀಡಲು ನೆರವಾದರು.
ಸಿಎಸ್ಕೆ ಪರ ಕಮ್ಬ್ಯಾಕ್ ಹೀರೋ ಮೊಯೀನ್ ಅಲಿ 28ಕ್ಕೆ2, ತೀಕ್ಷಣ 27ಕ್ಕೆ 3 ಮತ್ತು ಪ್ರೆಟೋರಿಯಸ್ 42ಕ್ಕೆ 1 ವಿಕೆಟ್ ಪಡೆದರು.
ಟೀಮ್ ಅಪ್ಡೇಟ್: ಧೋನಿ ನೇತೃತ್ವದ ಸಿಎಸ್ಕೆ 9 ಪಂದ್ಯಗಳಿಂದ 6 ಸೋಲು ಮತ್ತು 3 ಗೆಲುವಿನೊಂದಿಗೆ 6 ಅಂಕ ಹೊಂದಿದ್ದು, 9ನೇ ಸ್ಥಾನದಲ್ಲಿದೆ. ಆರ್ಸಿಬಿ 10 ಪಂದ್ಯಗಳಿಂದ ಅಂಕಗಳನ್ನು ಹೊಂದಿದ್ದು 6ನೇ ಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ಆಲ್ರೌಂಡರ್ ಮೊಯೀನ್ ಅಲಿ ಕಮ್ಬ್ಯಾಕ್ ಮಾಡಿದ್ದು, ಮಿಚೆಲ್ ಸ್ಯಾಂಟ್ನರ್ ಹೊರಗುಳಿದಿದ್ದಾರೆ. ಆರ್ಸಿಬಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.
ಆರ್ಸಿಬಿ ವಿರುದ್ಧ ಸಿಎಸ್ಕೆ ಅಮೋಘ ದಾಖಲೆ : ಎರಡೂ ತಂಡಗಳು ಐಪಿಎಲ್ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. ಆರ್ಸಿಬಿ ಕೇವಲ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಸಿಎಸ್ಕೆ 19 ಜಯ ಸಾಧಿಸಿದ್ದು, 1 ಪಂದ್ಯದ ಫಲಿತಾಂಶ ಬಂದಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೀ), ಮಹಿಪಾಲ್ ಲೊಮ್ರೋರ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್‌ವಾಡ್, ಡೆವೊನ್ ಕಾನ್ವೆ, ಮೊಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ/ವಿಕೀ), ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಸಿಮರ್‌ಜೀತ್ ಸಿಂಗ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ