ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮುಂಬರುವ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದಾರೆ. ಚುಟುಕು ಪಂದ್ಯಗಳಂದ ದೂರ ಉಳಿದುಕೊಂಡಿದ್ದ ಈ ಆಟಗಾರರು, ಜನವರಿ 11ರಿಂದ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಟಿ20I ಸರಣಿಗೆ ಅಣಿಯಾಗಲಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.
ಸಹ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯ ಕುಮಾರ್ ಯಾದವ್ ಗಾಯದಿಂದ ಬಳಲುತ್ತಿದ್ದು ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಭಾಗಶಃ ಅಲಭ್ಯರು. ಪರ್ಯಾಯವಾಗಿ ಬಹಳ ದಿನಗಳಿಂದ ಚುಟುಕು ಸರಣಿಗಳಿಂದ ದೂರವೇ ಉಳಿದುಕೊಂಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರು ಕ್ರೀಡಾಪಟುಗಳು 2022ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ಕಣ್ಣಿರುವ ಭಾರತೀಯ ತಂಡಕ್ಕೆ ಅಫ್ಘಾನಿಸ್ತಾನ ವಿರುದ್ಧದ ಸರಣಿ ಮಹತ್ವದ್ದಾಗಿದೆ. ಉಭಯ ತಂಡಗಳ ನಡುವೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು ಈ ಸರಣಿಯ ಮೊದಲ ಪಂದ್ಯ ಜನವರಿ 11ರಂದು ನಡೆಯಲಿದೆ.
"ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಲಭ್ಯವಾಗಲಿದ್ದಾರೆ" ಎಂದು ಬಿಸಿಸಿಐ ಮೂಲಗಳು ಶುಕ್ರವಾರ 'ಈಟಿವಿ ಭಾರತ'ಕ್ಕೆ ಖಚಿತಪಡಿಸಿವೆ. ಬಿಸಿಸಿಐ ಆಯ್ಕೆ ಸಮಿತಿಯು ಇಂದು ಸಭೆ ಸೇರಿ ತಂಡವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಐವರ ಆಯ್ಕೆ ಸಮಿತಿ ಆನ್ಲೈನ್ನಲ್ಲಿ ಸಭೆ ನಡೆಸಲಿದ್ದು ಬಳಿಕವೇ ನಾಯಕತ್ವದ ಬಗ್ಗೆ ಮಾಹಿತಿ ಹೊರ ಬೀಳಲಿದೆ. ಆಯ್ಕೆ ಸಮಿತಿಯ ಅಧ್ಯಕ್ಷರಾದ ಅಜಿತ್ ಅಗರ್ಕರ್, ಸಲೀಲ್ ಅಂಕೋಲಾ ಮತ್ತು ಶಿವಸುಂದರ್ ದಾಸ್ ಅವರು ದಕ್ಷಿಣ ಆಫ್ರಿಕಾದಲ್ಲಿ ತಂಡದೊಂದಿಗೆ ಉಳಿದುಕೊಂಡಿರುವ ಸುಬ್ರತಾ ಬ್ಯಾನರ್ಜಿ ಮತ್ತು ಎಸ್.ಶರತ್ ಜೊತೆಗೆ ಸದ್ಯದಲ್ಲೇ ಸಭೆ ನಡೆಸಿ ಈ ಬಗ್ಗೆ ಇಂದು ತೀರ್ಮಾಣಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಂದಿದ್ದರೂ ರೋಹಿತ್ ಶರ್ಮಾ ಚುಟುಕು ಆವೃತ್ತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಬಹುದು. ಆದರೆ, ಕಣದಲ್ಲಿ ಇತರ ಹೆಸರುಗಳೂ ಇವೆ. ರಾಹುಲ್ ದ್ರಾವಿಡ್ ಏನನ್ನು ಬಯಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ತಂಡವನ್ನು ಮುನ್ನಡೆಸಲು ಕಿರಿಯ ಆಟಗಾರರಿಗೂ ಬಡ್ತಿ ನೀಡಬಹುದು. ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಅವರು ಸಹ ಕೇಳಿ ಬರುತ್ತಿದೆ. ಶುಭಮನ್ ಗಿಲ್ ಅವರಂತಹ ಕಿರಿಯರನ್ನೂ ಸಹ ನಾಯಕತ್ವ ಪಾತ್ರಕ್ಕೆ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಟೆಸ್ಟ್ ರ‍್ಯಾಂಕಿಂಗ್: ಟೀಂ ಇಂಡಿಯಾ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ಆಸ್ಟ್ರೇಲಿಯಾ