ಮೊಹಾಲಿ(ಪಂಜಾಬ್): ಭಾರತ-ಅಫ್ಘಾನಿಸ್ತಾನ ತಂಡಗಳ ನಡುವಿನ ಮೊದಲ ಟಿ20 ಪಂದ್ಯದ ವೇಳೆ ವಿಪರೀತ ಚಳಿ ಆಟಗಾರರಿಗೆ ತೊಂದರೆ ನೀಡಿದೆ. ಮೊಹಾಲಿ ಮೈದಾನದಲ್ಲಿ ಸುಮಾರು 9 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನಡೆದ ಪಂದ್ಯದಲ್ಲಿ ಅಂತಿಮವಾಗಿ ಟೀಂ ಇಂಡಿಯಾ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0ರಿಂದ ಭಾರತ ಮುನ್ನಡೆ ಪಡೆದಿದೆ. ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿದರು.
"ನಾವು ಅಂದುಕೊಂಡಿದ್ದಕ್ಕಿಂತಲೂ ಕಡಿಮೆ ತಾಪಮಾನವಿತ್ತು. ಚೆಂಡು ಕೈಗೆ ತಗುಲಿದರೆ ವಿಪರೀತ ನೋವಾಗುತ್ತಿತ್ತು. ನಾವು ಪಂದ್ಯ ಗೆದ್ದೆವು. ಇಂತಹ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ. ಸ್ಪಿನ್ನರ್‌ಗಳು ಅದ್ಭುತವಾಗಿ ಬೌಲ್ ಮಾಡಿದರು. ನಾನು ರನೌಟ್ ಆಗಿ ನಿರಾಶೆಗೊಂಡೆ. ತಂಡಕ್ಕೆ ರನ್ ಗಳಿಸಲಿಲ್ಲ ಎಂಬ ನೋವು ನನ್ನನ್ನು ಕಾಡಿತು. ಏನೇ ಆಗಲಿ ಯಶಸ್ಸು ಮುಖ್ಯ. ಗಿಲ್ ಹೆಚ್ಚು ಸಮಯ ಬ್ಯಾಟಿಂಗ್ ಮಾಡಲು ಬಯಸಿ, ಕೆಲ ಹೊತ್ತು ಉತ್ತಮ ಇನಿಂಗ್ಸ್ ಆಡಿ ಪೆವಿಲಿಯನ್ ಸೇರಿದರು. ಶಿವಂ ದುಬೆ, ಜಿತೇಶ್, ರಿಂಕು ಮತ್ತು ತಿಲಕ್ ಉತ್ತಮ ಫಾರ್ಮ್ ಮುಂದುವರೆಸಿದರು" ಎಂದರು.
ಆರಂಭದಲ್ಲಿ ಸ್ವಲ್ಪ ಒತ್ತಡ: "ನಾನು ಈ ಮೈದಾನದಲ್ಲಿ ಆಡುವುದನ್ನು ನಿಜವಾಗಿಯೂ ಆನಂದಿಸಿದೆ. ತುಂಬಾ ಚಳಿಯಾಗಿದ್ದರೂ ಬ್ಯಾಟಿಂಗ್ ಮಾಡುವಾಗ ನನಗೆ ಅನಾನುಕೂಲವಾಗಲಿಲ್ಲ. ಫೀಲ್ಡಿಂಗ್ ಮಾಡುವಾಗ ನಾವು ಕಷ್ಟಗಳನ್ನು ಎದುರಿಸಿದ್ದೇವೆ. ಬಹಳ ದಿನಗಳ ನಂತರ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಆರಂಭದಲ್ಲಿ ಸ್ವಲ್ಪ ಒತ್ತಡವಿತ್ತು. ಮೊದಲ 2-3 ಎಸೆತಗಳನ್ನು ಆಡಿದ ನಂತರ ನಾನು ಒತ್ತಡದಿಂದ ಹೊರಬಂದೆ. ಸಿಕ್ಸ್ ಬಾರಿಸುವ ವಿಶ್ವಾಸ ನನಗಿದೆ. ಬೌಲಿಂಗ್‌ನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಯಿತು"’ ಎಂದು ಶಿವಂ ದುಬೆ ಹೇಳಿದರು. ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದ ದುಬೆ ಬ್ಯಾಟಿಂಗ್ನಲ್ಲಿ ಅರ್ಧಶತಕ (60*) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದರು.
ರಿಂಕುಗೆ 6ನೇ ಸ್ಥಾನ: "ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ನಂತರ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ಈ ಕ್ರಮಾಂಕದಲ್ಲಿ ರನ್ ಗಳಿಸುವುದನ್ನು ಆನಂದಿಸುತ್ತೇನೆ. ಈ ಬಾರಿ ಕಡಿಮೆ ಎಸೆತಗಳನ್ನು ಎದುರಿಸುವ ಅವಕಾಶವಿತ್ತು. ಈ ಹಿಂದೆ ಹಲವು ಬಾರಿ ಧೋನಿ ಅವರೊಂದಿಗೆ ಚರ್ಚಿಸಿದ್ದೆ. ಚೆಂಡಿಗೆ ಅನುಗುಣವಾಗಿ ಬ್ಯಾಟಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದರು. ಅದನ್ನು ಅಭ್ಯಾಸ ಮಾಡುತ್ತಿದ್ದೇನೆ'' ಎಂದು ರಿಂಕು ಸಿಂಗ್ ಹೇಳಿದರು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ ಸಾಬೀತು: ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ