ನಾಯಕ ರೋಹಿತ್ ಶರ್ಮಾ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಮುಂದಿನ ತಿಂಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಅವರಿಗೆ ರೆಸ್ಟ್ ಕೊಡುವ ಬಗ್ಗೆ ಚರ್ಚೆಗಳಾಗುತ್ತಿವೆ. ಆದರೆ ಆಯ್ಕೆದಾರರ ನಿರ್ಧಾರವೇನು ಎಂಬುದು ಬೆಂಗಳೂರಿನಲ್ಲಿ ನಡೆಯುವ ದುಲೀಪ್ ಟ್ರೋಫಿ ಮುನ್ನಾ ದಿನವಾದ ಜೂನ್ 27 ರಂದು ತಿಳಿಯಲಿದೆ.
ವೆಸ್ಟ್ ಇಂಡೀಸ್ನಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಜುಲೈ 12 ರಿಂದ 16 ವರೆಗೆ ಡೊಮಿನಿಕಾದಲ್ಲಿಯೂ ಮತ್ತು ಎರಡನೇ ಟೆಸ್ಟ್ ಅನ್ನು ಜುಲೈ 20 ರಿಂದ 24ರ ವರೆಗೆ ಟ್ರಿನಿಡಾಡ್‌ನಲ್ಲಿ ಆಡಲಿದೆ. ಐಪಿಎಲ್ 2023 ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಸುಸ್ತಾದಂತೆ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ವಿಂಡೀಸ್ ಪ್ರವಾಸದ ಟೆಸ್ಟ್ ನಾಯಕತ್ವವನ್ನು ಬೇರೆಯವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಎಲ್ಲ ಪಂದ್ಯಗಳಿಂದ ರೋಹಿತ್ ಹೊರಗುಳಿಯಲಿದ್ದಾರೆ. ಆದರೆ ಈ ನಿರ್ಧಾರವನ್ನು ಆಯ್ಕೆದಾರರು ತೆಗೆದುಕೊಳ್ಳುವ ಮುನ್ನ ರೋಹಿತ್ ಶರ್ಮಾರೊಂದಿಗೆ ಚರ್ಚಿಸಲಿದ್ದಾರೆ. ಟೆಸ್ಟ್ ನಾಯಕತ್ವವನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆಗೆ ವಹಿಸಬಹುದು ಎಂಬ ಲೆಕ್ಕಾಚಾರಗಳಿವೆ.
ರೋಹಿತ್ ಶರ್ಮಾ ಕಳಪೆ ಫಾರ್ಮ್: 16ನೇ ಆವೃತ್ತಿಯ ಐಪಿಎಲ್ನಲ್ಲಿ ರೋಹಿತ್ 16 ಪಂದ್ಯಗಳಲ್ಲಿ 20.75 ರ ಸರಾಸರಿಯಲ್ಲಿ ಎರಡು ಅರ್ಧಶತಕದಿಂದ 332 ರನ್ ಗಳಿಸಿದ್ದಾರೆ. ಇಂಗ್ಲೆಂಡ್ನ ಓವಲ್ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಒಂದು ಇನ್ನಿಂಗ್ಸ್ನಲ್ಲಿ 15, ಮತ್ತೊಂದರಲ್ಲಿ 43 ರನ್‌ಗಳಿಗೆ ಔಟಾಗಿದ್ದರು. ಹೀಗಾಗಿ ಅವರ ಒತ್ತಡವನ್ನು ತಗ್ಗಿಸುವ ಮತ್ತು ಏಷ್ಯಾಕಪ್ಗೂ ಮುನ್ನ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಬಹುದು.
2022ರಲ್ಲಿ ರೋಹಿತ್ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ ಭಾರತ ಆಡಿದ ಹತ್ತು ಟೆಸ್ಟ್‌ಗಳಲ್ಲಿ, ರೋಹಿತ್ ಮೂರು ಪಂದ್ಯಗಳನ್ನು ಆಡಿಲ್ಲ. ಕೋವಿಡ್-19 ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲಿ ಒಂದು ಮತ್ತು ಬಾಂಗ್ಲಾದೇಶದಲ್ಲಿ ಎರಡು ಪಂದ್ಯದಿಂದ ಹೊರಗಿದ್ದರು. ನಾಗ್ಪುರದ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ 120 ರನ್ ಕಲೆಹಾಕಿರುವುದು ನಾಯಕತ್ವದ ನಂತರದ ಬೆಸ್ಟ್ ಸ್ಕೋರ್ ಆಗಿದೆ.
ಬೌಲರ್ಗಳಿಗೂ ವಿಶ್ರಾಂತಿ: ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಟೆಸ್ಟ್‌ನಿಂದ ರೆಸ್ಟ್ ಕೊಡುವ ಸಾಧ್ಯತೆ ಇದೆ. ಮುಂದೆ ಏಷ್ಯಾಕಪ್, ವಿಶ್ವಕಪ್ ಇರುವ ಕಾರಣ ಟೆಸ್ಟ್‌ನಿಂದ ಕೈ ಬಿಟ್ಟು ಏಕದಿನ ಮತ್ತು ಟಿ20ಗೆ ಆಡಿಸಲಿದ್ದಾರೆ ಎನ್ನಲಾಗಿದೆ.
ಪೂಜಾರ ಬದಲಿಗೆ ಜೈಸ್ವಾಲ್ಗೆ ಸ್ಥಾನ: ಕೌಂಟಿಯಲ್ಲಿ ಉತ್ತಮವಾಗಿ ಆಡಿದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲ ಚೇತೇಶ್ವರ ಪೂಜಾರ ಅವರಿಗೆ ಕೊಕ್ ಕೊಟ್ಟು ಅವರ ಬದಲಿಯಾಗಿ ಜೈಸ್ವಾಲ್ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಡಬ್ಲ್ಯೂಟಿಸಿ ಫೈನಲ್ಗೆ ಮೀಸಲು ಆಟಗಾರನಾಗಿ ಆಯ್ಕೆ ಆಗಿರುವ ಯುವ ಪ್ರತಿಭೆ ಈ ವರ್ಷ ಐಪಿಎಲ್ನಲ್ಲಿ ಒಂದು ಶತಕಗಳಿಸಿ ಉತ್ತಮ ರನ್ ಕಲೆಹಾಕಿದ್ದಾರೆ. ಅಲ್ಲದೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಜೈಸ್ವಾಲ್ ಅವರನ್ನು ವೆಸ್ಟ್ ಇಂಡೀಸ್ ಎದುರು ಪಾದಾರ್ಪಣೆ ಮಾಡಿಸುವ ಸಾಧ್ಯತೆಗಳೂ ಚರ್ಚೆಯಲ್ಲಿವೆ.
ಇದನ್ನೂ ಓದಿ: Asia Cup 2023: ಏಷ್ಯಾ ಕಪ್ಗೆ ಮರಳುವರೇ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್?