ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಭಾರತ ತಂಡದ ಮುಂದಿನ ದೀರ್ಘಾವಧಿಯ ನಾಯಕ ಯಾರು ಎಂಬ ಬಗ್ಗೆ ಉತ್ತಮ ಕಲ್ಪನೆ ಒದಗಿಸಬಹುದು ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ಪ್ರಸ್ತುತ ಎಲ್ಲ ಮಾದರಿಗಳಲ್ಲೂ ತಂಡದ ನಾಯಕರಾಗಿದ್ದಾರೆ. ಆದರೆ ರೋಹಿತ್ಗೆ ಈಗಾಗಲೇ 34 ವರ್ಷ ವಯಸ್ಸಾಗಿದ್ದು, ಮುಂದಿನ ಕೆಲ ವರ್ಷಗಳಲ್ಲೇ ಅವರ ಸ್ಥಾನವನ್ನು ಯುವ ಆಟಗಾರನೊಬ್ಬ ತುಂಬಲಿದ್ದಾರೆ.
ಈ ಬಗ್ಗೆ ಇಎಸ್ಪಿಎನ್ ಕ್ರಿಕ್ಇನ್ಫೋ (ESPNCricinfo)ಗೆ ಪ್ರತಿಕ್ರಿಯಿಸಿರುವ ಭಾರತ ತಂಡ ಮಾಜಿ ಕೋಚ್ ರವಿ ಶಾಸ್ತ್ರಿ, 'ರೋಹಿತ್ ಚಿಕ್ಕವನಾಗುತ್ತಿಲ್ಲ, ವಿರಾಟ್ ಕೊಹ್ಲಿ ಕೂಡ ಇದಕ್ಕೆ ಹೊರತಾಗಿಲ್ಲ. ಮುಂದಿನ ಎರಡು, ಮೂರು ವರ್ಷಗಳ ನಂತರ ನಾಯಕ ಯಾರಾಗಬಹುದು ಎಂಬುದನ್ನು ಯೋಚಿಸಬೇಕಿದೆ' ಎಂದು ಹೇಳಿದ್ದಾರೆ. 2021ರ ಟಿ-20 ವಿಶ್ವಕಪ್ ಬಳಿಕ ಕೊಹ್ಲಿ ಭಾರತದ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಬಳಿಕ ಏಕದಿನ ನಾಯಕತ್ವದಿಂದ ವಿರಾಟ್ ಅವರನ್ನು ವಜಾಗೊಳಿಸಲಾಯಿತು. ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಭಾರತ ಸೋತ ನಂತರ ಅವರು ನಂತರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು. ಆ ಬಳಿಕ ಎಲ್ಲ ಮಾದರಿಯ ಹೊಣೆಗಾರಿಕೆಯು ರೋಹಿತ್ ಹೆಗಲಿಗೇರಿದೆ. ಸದ್ಯ ಎಲ್ಲರ ದೃಷ್ಟಿ ಚುಕುಟು ಕ್ರಿಕೆಟ್ನ ಜನಪ್ರಿಯ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ನೆಟ್ಟಿದೆ. ಎಲ್ಲ ತಂಡಗಳೂ ಹೊಸ ರೂಪ ಪಡೆದುಕೊಂಡಿದ್ದು, ಎರಡು ನೂತನ ತಂಡಗಳ ಸೇರ್ಪಡೆಯಾಗಿದೆ. ಹತ್ತು ತಂಡಗಳು ಟ್ರೋಫಿಗಾಗಿ ಕಾದಾಡಲಿವೆ.
ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ತಮ್ಮ ತಂಡಗಳನ್ನು ಮುನ್ನಡೆಸುತ್ತಿದ್ದು, ಇವರೆಲ್ಲರ ಮೇಲೆ ಕಣ್ಣಿಡಬೇಕಿದೆ ಎಂದ ಶಾಸ್ತ್ರಿ, ನಾನು ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರನ್ನು ತುಂಬಾ ಹತ್ತಿರದಿಂದ ನೋಡುತ್ತೇನೆ. ಸಹಜವಾಗಿ ಕೆ.ಎಲ್ ರಾಹುಲ್ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವ ರೀತಿ ಮತ್ತು ಹಾರ್ದಿಕ್ ಪಾಂಡ್ಯಾಗೆ ನಾಯಕತ್ವವು ಆತನಲ್ಲಿ ಇನ್ನಷ್ಟು ಬಲ ತುಂಬಲಿದೆಯೇ ಎಂಬುದನ್ನು ಗಮನಿಸಬೇಕಿದೆ ಎಂದರು.
2022ರ ಐಪಿಎಲ್ ಆವೃತ್ತಿಯು ಮಾರ್ಚ್ 26ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಹಣಾಹಣಿಯೊಂದಿಗೆ ಆರಂಭವಾಗಲಿದೆ.
ಇದನ್ನೂ ಓದಿ: ಹರಿಣಗಳ ನಾಡಲ್ಲಿ ಇತಿಹಾಸ ಬರೆದ ಬಾಂಗ್ಲಾ: 2 1 ಅಂತರದಲ್ಲಿ ಏಕದಿನ ಸರಣಿ ಗೆಲುವು