ನವದೆಹಲಿ : ಭಾರತ ಸೀಮಿತ ಓವರ್ಗಳ ತಂಡದ ನಾಯಕ ರೋಹಿತ್ ಶರ್ಮಾ ಹ್ಯಾಮ್ಸ್ಟ್ರಿಂಗ್(ಸ್ನಾಯು ಸೆಳೆತ) ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ನಡೆಯಲಿರುವ ಸೀಮಿತ ಓವರ್ಗಳ ಸರಣಿಗೆ ಕಮ್ಬ್ಯಾಕ್ ಮಾಡುವ ಅವಕಾಶ ಹೆಚ್ಚಿದೆ ಎಂದು ತಿಳಿದು ಬಂದಿದೆ.
ಇತ್ತೀಚಿಗೆ ಮುಗಿದ ದಕ್ಷಿಣ ಆಫ್ರಿಕಾ ಸರಣಿಗೆ ಘೋಷಿಸಿದ್ದ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಉಪನಾಯಕನಾಗಿ ನೇಮಕಗೊಂಡಿದ್ದರು. ಆದರೆ, ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಸರಣಿಗೆ ಕೆಲವೇ ದಿನಗಳಿರುವಾಗಿ ಪ್ರವಾಸದಿಂದ ಹೊರಬಿದ್ದಿದ್ದರು.
ಕಳೆದ ಬುಧವಾರ ಏಕದಿನ ತಂಡವನ್ನು ಘೋಷಿಸುವ ವೇಳೆ ಸಂಪೂರ್ಣ ಫಿಟ್ ಆಗದ ಕಾರಣ ಅವರು ಅನಿವಾರ್ಯವಾಗಿ ಏಕದಿನ ಸರಣಿಯಿಂದಲೂ ಹೊರ ಬರುವಂತಾಗಿತ್ತು.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಶರ್ಮಾ ಅವರ ಪುನಶ್ಚೇತನ ತುಂಬಾ ಚೆನ್ನಾಗಿ ಸಾಗುತ್ತಿದೆ. ವೆಸ್ಟ್ ಇಂಡೀಸ್ ಸರಣಿಯ ವೇಳೆಗೆ ಅವರು ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ. ಫೆಬ್ರವರಿ 6ರಿಂದ ಅಹ್ಮದಾಬಾದ್ನಲ್ಲಿ ಸರಣಿ ಆರಂಭವಾಗಲಿದೆ. ಇನ್ನೂ ಹೆಚ್ಚುಕಡಿಮೆ 3 ವಾರಗಳ ಸಮಯವಿದೆ ಎಂದು ಬಿಸಿಸಿಐ ಮೂಲ ಪಿಟಿಐಗೆ ಮಾಹಿತಿ ನೀಡಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿ ಮತ್ತು ಅಷ್ಟೇ ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಫೆಬ್ರವರಿ 6ರಿಂದ 12 ಏಕದಿನ ಮತ್ತು ಫೆಬ್ರವರಿ 15 ರಿಂದ 20ರವರೆಗೆ ಟಿ20 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ನಾಯಕನಾಗಬೇಕು : ಮಾಜಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ