ನವದೆಹಲಿ: ಡಿಸೆಂಬರ್ 30ರಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ತಂಡದ ಬ್ಯಾಟರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಶೀಘ್ರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂಬ ಸಿಹಿ ಸುದ್ದಿ ಬಂದಿದೆ. ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪಂತ್ ಅಪಘಾತ ಸ್ಥಳದಲ್ಲಿ ಸಹಕರಿಸಿದ ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರಿಗೆ, ಉತ್ತರಾಖಂಡ ಸರ್ಕಾರ, ಬಿಸಿಸಿಐ ಹಾಗೂ ಅಭಿಮಾನಿಗಲಿಗೆ ಧನ್ಯವಾದ ಹೇಳಿದ್ದರು.
ರೂರ್ಕಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ತಕ್ಷಣಕ್ಕೆ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಜನವರಿ ನಾಲ್ಕರಂದು ಜಾಲಿಗ್ರಾಂಟ್ ವಿಮಾನ ನಿಲ್ದಾಣದಿಂದ ಮುಂಬೈಗೆ ಏರ್ಶಿಫ್ಟ್ ಮಾಡಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಇಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ನಿರ್ದೇಶಕ, ಆರ್ತ್ರೋಸ್ಕೊಪಿ ಮತ್ತು ಭುಜದ ತಜ್ಞ ಡಾ.ದಿನ್‌ಶಾ ಪರ್ದಿವಾಲಾ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಅಪಘಾತದಲ್ಲಿ ಪಂತ್ ಅವರ ಮೂರು ಅಸ್ಥಿರಜ್ಜುಗಳಿಗೆ ಏಟು ಬಿದ್ದಿತ್ತು. ಜನವರಿ 6 ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಮಾಹಿತಿ ನೀಡಿದ್ದ ವೈದ್ಯರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.
ಎರಡು ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ: ಪಂತ್ ಅವರನ್ನು ಸುಮಾರು ಎರಡು ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ರಿಷಭ್ ಪಂತ್ ಎರಡು ತಿಂಗಳೊಳಗೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿದ್ದಾರೆ. ಮೈದಾನಕ್ಕಿಳಿದು ಆಡಲು ಇನ್ನೂ ನಾಲ್ಕರಿಂದ ಆರು ತಿಂಗಳು ಕಾಲ ತೆಗೆದು ಕೊಳ್ಳಬಹುದು ಹಾಗೂ ಅವರು ಸಂಪೂರ್ಣ ಚೇತರಿಸಿಕೊಂಡ ನಂತರ ಆಟಕ್ಕೆ ಮರಳಿದರೆ ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ.
ಪಂತ್ ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ: ಅಪಘಾತದಲ್ಲಿ ಮೊಣಕಾಲಿನ ಅಸ್ಥಿರಜ್ಜುಗಳು ತುಂಡಾಗಿದ್ದು ಶಸ್ತ್ರಚಿಕಿತ್ಸೆ ಅಗತ್ಯ. ಎಂಸಿಎಲ್ ಸರ್ಜರಿ ಅತ್ಯಂತ ಮಹತ್ವದ್ದಾಗಿದ್ದು, ಈಗ ಎರಡು ವಾರಗಳಲ್ಲಿ ರಿಷಬ್ ಅವರ ಪಿಸಿಎಲ್ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ವೈದ್ಯರು ಬಿಸಿಸಿಐ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಆಸ್ಪತ್ರೆಯಿಂದ ಪಂತ್ ಬಿಡುಗಡೆ ಆದ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡು ಮೈದಾನಕ್ಕೆ ಮರಳಲು ನಾಲ್ಕರಿಂದ ಆರು ತಿಂಗಳು ಬೇಕಾಗಬಹುದು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಬಿಸಿಸಿಐ ಅವರ ಪುನರ್ವಸತಿಗೆ ಯೋಜನೆ ಸಿದ್ಧಪಡಿಸಲಿದೆ. ಬೆಂಗಳೂರಿನ ಎನ್ಸಿಎಯಲ್ಲಿ ಹೆಚ್ಚಿನ ಗಮನಕ್ಕೆ ಬಿಸಿಸಿಐ ಕರೆತರುವ ಸಾಧ್ಯತೆಯೂ ಇದೆ.
ಅಪಘಾತದ ನಂತರ ಮೊದಲ ಪೋಸ್ಟ್: ಎರಡು ದಿನಗಳ ಹಿಂದೆ ರಿಷಬ್ ಪಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಅದು ಅಪಘಾತದ ನಂತರ ಪಂತ್ ಮಾಡಿದ ಮೊದಲ ಪೋಸ್ಟ್ ಆಗಿದೆ. ಅಂದು ಸರಣಿ ಟ್ವಿಟ್ ಮಾಡಿದ್ದ ಅವರು ಅಭಿಮಾನಿಗಳಿಗೆ, ಉತ್ತರಾಖಂಡ ಸರ್ಕಾರಕ್ಕೆ ಮತ್ತು ಬಿಸಿಸಿಐಗೆ ಧನ್ಯವಾದ ಹೇಳಿದ್ದರು. ಅಪಘಾತದ ವೇಳೆ ರಕ್ಷಿಸಿದ್ದ ಬಸ್ ಚಾಲಕ ಮತ್ತು ನಿರ್ವಹಕರ ಫೋಟೋ ಹಂಚಿಕೊಂಡು 'ನಾನು ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಾಗದಿರಬಹುದು. ಆದರೆ, ಈ ಇಬ್ಬರು ವೀರರಿಗೆ ನಾನು ಧನ್ಯವಾದ ಹೇಳದಿರಲಾರೆ. ನನ್ನನ್ನು ರಕ್ಷಿಸಿ, ಅಪಘಾತದ ಸ್ಥಳದಿಂದ ಆಸ್ಪತ್ರೆಗೆ ಸೇರಿಸಿದ ರಜತ್ ಕುಮಾರ್ ಮತ್ತು ನಿಶು ಕುಮಾರ್ ನಾನು ನಿಮಗೆ ಚಿರಋಣಿ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.
ಇದನ್ನೂ ಓದಿ: 'ನನ್ನ ಜೀವನದ ಉದ್ದಕ್ಕೂ ನಾನು ನಿಮಗೆ ಋಣಿಯಾಗಿದ್ದೇನೆ': ಪಂತ್ ಹೀಗೆ ಹೇಳಿದ್ದು ಯಾರಿಗೆ?