ಹೈದರಾಬಾದ್: ಟೀಂ ಇಂಡಿಯಾ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಮುಖ ಆಟಗಾರರಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಕಳೆದ ಅನೇಕ ವರ್ಷಗಳಿಂದಲೂ ಈ ಪ್ಲೇಯರ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾಗವಾಗಿದ್ದಾರೆ. ಆದರೆ, ಇದೀಗ ದಿಢೀರ್ ಆಗಿ ಅವರು ತೆಗೆದುಕೊಂಡಿರುವ ನಿರ್ಧಾರವೊಂದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಜೊತೆಗೆ 2023ರ ಐಪಿಎಲ್ನಲ್ಲಿ ಅವರು ಸಿಎಸ್ಕೆ ತಂಡದಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಮಾತು ಕೇಳಿ ಬರಲು ಶುರುವಾಗಿವೆ.
2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ರವೀಂದ್ರ ಜಡೇಜಾ ಚೆನ್ನೈ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ, ಅವರ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳ ಪೈಕಿ 6ರಲ್ಲಿ ಸೋಲು ಕಂಡಿತ್ತು. ಹೀಗಾಗಿ, ಜಡೇಜಾ ನಾಯಕತ್ವ ಮರಳಿ ಧೋನಿಗೆ ಹಸ್ತಾಂತರ ಮಾಡಿದ್ದರು. ಈ ವೇಳೆ, ಸಿಎಸ್ಕೆ ಹಾಗೂ ಜಡೇಜಾ ನಡುವಿನ ಸಂಬಂಧ ಸರಿಯಾಗಿ ಉಳಿದಿಲ್ಲ ಎಂಬ ಮಾತು ಕೇಳಿ ಬಂದಿದ್ದವು.
ಐಪಿಎಲ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲೂ ಜಡೇಜಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಜೊತೆಗೆ ಗಾಯದ ಸಮಸ್ಯೆಯಿಂದ ಅವರು ತಂಡದಿಂದ ಹೊರಗುಳಿದಿದ್ದರು. ಇದೀಗ, ದಿಢೀರ್ ಆಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ 2021, 22ರ ಸಿಎಸ್ಕೆ ಜೊತೆಗಿನ ಎಲ್ಲ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ಐಪಿಎಲ್ನಲ್ಲಿ ಅವರು ಬೇರೊಂದು ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಎಸ್ಕೆ ಹಾಗೂ ಜಡೇಜಾ ಪರಸ್ಪರ ಅನ್ಫಾಲೋ ಮಾಡಿದ್ದಾರೆ.
ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡದ ಜಡೇಜಾ: ಪ್ರತಿ ವರ್ಷ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬಕ್ಕೆ ವಿಶ್ ಮಾಡ್ತಿದ್ದ ರವೀಂದ್ರ ಜಡೇಜಾ ಈ ಸಲ ಶುಭಾಶಯ ತಿಳಿಸಿಲ್ಲ. ಈ ಮೂಲಕ ಉಭಯ ನಾಯಕರ ಮಧ್ಯೆ ಬಿರುಕು ಮೂಡಿದೆ ಎಂಬ ಮಾತು ಕೇಳಿ ಬಂದಿದೆ. 022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುವುದಕ್ಕೂ ಮುಂಚಿತವಾಗಿ ಜಡೇಜಾಗೆ ಬರೋಬ್ಬರಿ 16 ಕೋಟಿ ರೂಪಾಯಿ ನೀಡಿ ತಂಡ ತನ್ನಲ್ಲೇ ಉಳಿಸಿಕೊಂಡಿತ್ತು.