ಮೊಹಾಲಿ: ಭಾರತ ತಂಡದ ಆಲ್ರೌಂಡರ್ ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ 175 ರನ್ಗಳಿಸುವ ಮೂಲಕ 7ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ಗಳಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಜಡೇಜಾ ಶನಿವಾರ ಈ ಶತಕದ ಮೂಲಕ ಕಪಿಲ್ ದೇವ್ ಅವರ ಹೆಸರಿನಲ್ಲಿದ್ದ 35 ವರ್ಷಗಳ ಸುದೀರ್ಘ ದಾಖಲೆಯನ್ನು ಮುರಿದರು. ಕಪಿಲ್1986ರಲ್ಲಿ ಶ್ರೀಲಂಕಾ ವಿರುದ್ಧವೇ ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು 163 ರನ್ಗಳಿಸಿದರು.
ಜಡೇಜಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 150ಕ್ಕೂ ಹೆಚ್ಚು ರನ್ಗಳಿಸಿದ ಭಾರತದ 3ನೇ ಬ್ಯಾಟರ್ ಎನಿಸಿಕೊಂಡರು. ಜಡೇಜಾ, ಕಪಿಲ್ ದೇವ್ ಅಲ್ಲದೆ, ಭಾರತದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ 7ನೇ ಕ್ರಮಾಂಕದಲ್ಲಿ 150ರ ಗಡಿ ದಾಟಿದ್ದಾರೆ. ಪಂತ್ 2019 ಸಿಡ್ನಿಯಲ್ಲಿ ಅಜೇಯ 159 ರನ್ಗಳಿಸಿದ್ದರು.
ಮಹೇಂದ್ರ ಸಿಂಗ್ ಧೋನಿ 2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7ನೇ ಕ್ರಮಾಂಕದಲ್ಲಿ 144 ರನ್ಗಳಿಸಿ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಒಟ್ಟಾರೆ 7ನೇ ಕ್ರಮಾಂಕದಲ್ಲಿನ ವಿಶ್ವದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದು, ಅವರು 270 ರನ್ಗಳಿಸಿದ್ದಾರೆ.
ಇನ್ನು ಟೆಸ್ಟ್ ಪಂದ್ಯಕ್ಕೆ ಬರುವುದಾದರೆ ಎಡಗೈ ಬ್ಯಾಟರ್ ಜಡೇಜಾ ಈ ಪಂದ್ಯದಲ್ಲಿ 3 ಶತಕದ ಜೊತೆಯಾಟದಲ್ಲಿ ಪಾಲ್ಗೊಂಡರು. ಮೊದಲು ರಿಷಭ್ ಪಂತ್, ನಂತರ ಅಶ್ವಿನ್ ಹಾಗೂ ಕೊನೆಯಲ್ಲಿ ಶಮಿ ಜೊತೆ ಸೇರಿ ಶತಕದಾಟದಲ್ಲಿ ಪಾಲ್ಗೊಂಡು 574 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.
ಇದನ್ನೂ ಓದಿ:ಜಡೇಜಾ ಅಜೇಯ 175: 574/8ಕ್ಕೆ ಡಿಕ್ಲೇರ್ ಘೋಷಿಸಿಕೊಂಡ ಟೀಮ್ ಇಂಡಿಯಾ