ಚೆನ್ನೈ: ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಪಾಂಡಿಚೇರಿ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಕರ್ನಾಟಕ ತಂಡ ಮೊದಲ ದಿನ ಗೌರವ ಮೊತ್ತ ದಾಖಲಿಸಲು ಕಾರಣರಾದರು.
ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಈಗಾಗಲೆ 2 ಲೀಗ್ ಪಂದ್ಯಗಳಲ್ಲಿ ತಲಾ ಒಂದು ಜಯ ಮತ್ತು ಒಂದು ಡ್ರಾ ಸೇರಿದಂತೆ 9 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದೀಗ ಕೊನೆಯ ಲೀಗ್ ಪಂದ್ಯದಲ್ಲೂ ಪಾಂಡಿಚೇರಿ ವಿರುದ್ಧವೂ ಪ್ರಾಬಲ್ಯ ಸಾಧಿಸಿದ್ದು, ಕ್ವಾರ್ಟರ್ ಫೈನಲ್ಗೆ ಸನಿಹವಾಗುವ ಮುನ್ಸೂಚನೆ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮೊದಲ ದಿನ 90 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 293 ರನ್ಗಳಿಸಿದೆ. ಆರಂಭಿಕ ಬ್ಯಾಟರ್ ರವಿಕುಮಾರ್ ಸಮರ್ಥ್ (11) ಮತ್ತು ಕಳೆದ ಪಂದ್ಯದ ಶತಕ ವೀರ ಕರುಣ್ ನಾಯರ್(6) ಇಂದು ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ದೇವದ್ ಪಡಿಕ್ಕಲ್(161) ಮತ್ತು ಕೆ.ವಿ. ಸಿದ್ಧಾರ್ಥ್(85) 3ನೇ ವಿಕೆಟ್ಗೆ 223 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದ್ದಲ್ಲದೆ, ಬೃಹತ್ ಮೊತ್ತದತ್ತ ತಂಡವನ್ನು ಕೊಂಡೊಯ್ದರು.
ಶತಕದ ಮೂಲಕ ಫಾರ್ಮ್ಗೆ ಮರಳಿದ ದೇವದತ್: ದೇವದತ್ ಪಡಿಕ್ಕಲ್ ಕಳೆದ 2 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅವರು ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 21, 4, 8, 49 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಇಂದು ಆರಂಭಿಕರಾಗಿ ಕಣಕ್ಕಿಳಿದು ಆಕರ್ಷಕ ಶತಕ ದಾಖಲಿಸಿ ಫಾರ್ಮ್ಗೆ ಮರಳಿದರು. ಇದು ಅವರ ಚೊಚ್ಚಲ ಪ್ರಥಮ ದರ್ಜೆ ಶತಕವಾಗಿತ್ತು. 21 ವರ್ಷದ ಯುವ ಬ್ಯಾಟರ್ 277 ಎಸೆತಗಳಲ್ಲಿ 20 ಬೌಂಡರಿ ಮತ್ತು 2 ಸಿಕ್ಸರ್ ಜೊತೆಗೆ ಅಜೇಯ 161 ರನ್ಗಳಿಸಿದರು.
ಇವರಿಗೆ ಸಾಥ್ ನೀಡಿದ ಸಿದ್ಧಾರ್ಥ್ 168 ಎಸೆತಗಳಲ್ಲಿ 11 ಬೌಂಡರಿ ಸಹಿತ 85 ರನ್ಗಳಿಸಿರು. ನಾಯಕ ಮನೀಶ್ ಪಾಂಡೆ 33 ಎಸೆತಗಳಲ್ಲಿ ಅಜೇಯ 21 ರನ್ಗಳಿಸಿ ಪಡಿಕ್ಕಲ್ ಜೊತೆಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಇದನ್ನೂ ಓದಿ:100ನೇ ಪಂದ್ಯದ ಸಂಭ್ರಮದಲ್ಲಿರುವ ಕೊಹ್ಲಿಯ ಸಂಪೂರ್ಣ ಟೆಸ್ಟ್ ಕ್ರಿಕೆಟ್ ಅಂಕಿ-ಅಂಶ ಇಲ್ಲಿದೆ