ಆಲೂರು (ಬೆಂಗಳೂರು): ತೀವ್ರ ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶ-ಕರ್ನಾಟಕ ತಂಡಗಳ ನಡುವಿನ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ಸೋಲು ಕಂಡಿತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು, ಉತ್ತರ ಪ್ರದೇಶ ಸೆಮಿಫೈನಲ್ ಪ್ರವೇಶಿಸಿತು. ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 213ರನ್ಗಳ ಗುರಿ ಬೆನ್ನತ್ತಿದ್ದ ಎದುರಾಳಿ ತಂಡ 5 ವಿಕೆಟ್ಗಳ ಜಯ ದಾಖಲಿಸಿದೆ.
ತಂಡದ ಪರ 2ನೇ ಇನ್ನಿಂಗ್ಸ್ನಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಕ್ಯಾಪ್ಟನ್ ಕರಣ್ ಶರ್ಮಾ(93) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ 253ರನ್ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಉತ್ತರ ಪ್ರದೇಶ ಕೇವಲ 155ರನ್ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ, ಮನೀಷ್ ಪಾಂಡೆ ಬಳಗಕ್ಕೆ 98ರನ್ಗಳ ಮುನ್ನಡೆ ಸಿಕ್ಕಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕರ್ನಾಟಕ ಕೇವಲ 114ರನ್ಗಳಿಗೆ ಆಲೌಟ್ ಆಗಿ, ಯುಪಿ ತಂಡಕ್ಕೆ 213ರನ್ಗಳ ಗೆಲುವಿನ ಗುರಿ ನೀಡಿತ್ತು.
ಈ ಗುರಿ ಬೆನ್ನತ್ತಿದ್ದ ಉತ್ತರ ಪ್ರದೇಶ ಆರಂಭದಲ್ಲಿ ವಿಕೆಟ್ಗಳನ್ನು ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಪ್ರಿಯಂ ಗರ್ಗ್(52) ಹಾಗೂ ನಾಯಕ ಕರಣ್ ಶರ್ಮಾ(93)ರನ್ಗಳ ನೆರವಿನಿಂದ 65.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213ರನ್ಗಳಿಸಿ, ಗೆಲುವು ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ ಮೊದಲ ಇನ್ನಿಂಗ್ಸ್ 253/10, ಎರಡನೇ ಇನ್ನಿಂಗ್ಸ್ 114/10, ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 155/10, ಎರಡನೇ ಇನ್ನಿಂಗ್ಸ್ 213/5