ಮುಂಬೈ: ಟೀಂ ಇಂಡಿಯಾದ ಆಲ್ರೌಂಡರ್ ಶಿವಂ ದುಬೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಆರಂಭದ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಶಿವಂ ದುಬೆ ಜೊತೆಗೆ ತಂಡದ ವಿಡಿಯೋ ಅನಾಲಿಸ್ಟ್ ಗಣೇಶ್ ತ್ಯಾಗಿಗೆ ಸೋಂಕು ದೃಢಪಟ್ಟಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೂಲ ತಿಳಿಸಿದೆ. ಶಿವಂ ದುಬೆ ಜಾಗಕ್ಕೆ ಸಾಯಿರಾಜ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಈ ಸಾಲಿನ ರಣಜಿ ಟ್ರೋಫಿಗೆ ಕೋವಿಡ್ ಕಾಟ ಹೆಚ್ಚಾಗಿದೆ. ಈಗಾಗಲೇ ಬಂಗಾಳ ತಂಡದ ಏಳು ಸದಸ್ಯರಿಗೆ ಕೊರೊನಾ ಖಚಿತಗೊಂಡಿದೆ. ಇವರೆಲ್ಲರಿಗೂ ಕ್ವಾಂರಂಟೈನ್ನಲ್ಲಿಡಲಾಗಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.
ವೇಳಾಪಟ್ಟಿ ಪ್ರಕಾರವೇ ಪಂದ್ಯಾವಳಿ- ಗಂಗೂಲಿ
ವಿವಿಧ ತಂಡದ ಆಟಗಾರರಿಗೆ ಕೊರೊನಾ ದೃಢಗೊಂಡಿದ್ದರಿಂದ ಟೂರ್ನಿ ರಣಜಿ ಟ್ರೋಫಿ ಮುಂದೂಡಿಕೆಯಾಗಲಿದೆ ಎಂಬ ಮಾತು ಕೇಳಿ ಬರಲು ಶುರುವಾಗಿದ್ದವು. ಆದರೆ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಈಗಾಗಲೇ ನಿಗದಿಗೊಂಡಿರುವ ವೇಳಾಪಟ್ಟಿ ಪ್ರಕಾರ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಜನವರಿ 13ರಿಂದ ರಣಜಿ ಟೂರ್ನಿ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಬಂಗಾಳ ಹಾಗೂ ತ್ರಿಪುರ ನಡುವೆ ಪಂದ್ಯ ನಡೆಯಲಿದೆ.
ಶಿವಂ ದುಬೆ ಟೀಂ ಇಂಡಿಯಾ ಪರ ಏಕೈಕ ಏಕದಿನ ಪಂದ್ಯ ಹಾಗೂ 8 ಟಿ20 ಪಂದ್ಯಗಳನ್ನಾಡಿದ್ದಾರೆ.