ರಾಜ್ಕೋಟ್(ಗುಜರಾತ್): ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಮೋಘ ಆಟವಾಡಿ ಶತಕ ಸಾಧನೆ ಮಾಡಿದರು. ಸೂರ್ಯರ ಭರ್ಜರಿ ಬ್ಯಾಟಿಂಗ್ಗೆ ಲಂಕಾ ಸೋಲು ಕಂಡು ಸರಣಿ ಸೋಲನುಭವಿಸಿತು. ಈ ಮೂಲಕ ಭಾರತ ತವರು ನೆಲದಲ್ಲಿ ಸತತ 12 ನೇ ಸರಣಿ ಗೆಲುವು ಸಾಧಿಸಿತು. ಪಂದ್ಯದಲ್ಲಿ ಕೇಂದ್ರ ಬಿಂದುವಾಗಿದ್ದು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.
51 ಎಸೆತಗಳಲ್ಲಿ 112 ರನ್ ಗಳಿಸುವ ಮೂಲಕ ಸೂರ್ಯ ಮತ್ತೊಮ್ಮೆ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದರು. ಪಂದ್ಯದ ಬಳಿಕ ಸೂರ್ಯಕುಮಾರ್ ಜೊತೆಗೆ ಸಂದರ್ಶನ ನಡೆಸಿದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 'ನೀವು ಚಿಕ್ಕವರಿದ್ದಾಗ ನಾನು ಬ್ಯಾಟಿಂಗ್ ಮಾಡುವುದನ್ನು ನೀವು ನೋಡಿಲ್ಲ ಎಂದೆನಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಸೂರ್ಯ, ನಾನು ನೋಡಿದ್ದೇನೆ ಎಂದು ಉತ್ತರಿಸಿ ನಕ್ಕಿದ್ದಾರೆ.
ಬ್ಯಾಟಿಂಗ್ ಶೈಲಿ ಬಗ್ಗೆ ರಾಹುಲ್ ಕಾಮಿಡಿ: ಸೂರ್ಯಕುಮಾರ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್ ಅವರು, ನನ್ನ ಸಕ್ರಿಯ ಕ್ರಿಕೆಟ್ ಜೀವನದ ವೇಳೆ ಸೂರ್ಯ ಬ್ಯಾಟಿಂಗ್ ಅನ್ನು ಗಮನಿಸಿಲ್ಲ. ಹೀಗಾಗಿ ಆತ ಯರ್ರಾಬಿರ್ರಿ ಬ್ಯಾಟ್ ಬೀಸುತ್ತಿದ್ದಾನೆ ಎಂದು ಹೇಳಿದರು. ಅಂದರೆ ದ್ರಾವಿಡ್ ಅವರು ತಮ್ಮ ರಕ್ಷಣಾತ್ಮಕ ಬ್ಯಾಟಿಂಗ್ ಅನ್ನು ತಾವೇ ತಮಾಷೆ ಮಾಡಿದ್ದಾರೆ. ಈ ವೇಳೆ ಸೂರ್ಯಕುಮಾರ್ ಇಲ್ಲ, ನಾನು ನಿಮ್ಮ ಬ್ಯಾಟಿಂಗ್ ಶೈಲಿಯನ್ನೇ ನೋಡಿಯೇ ಬೆಳೆದಿದ್ದೇನೆ ಎಂದು ಉತ್ತರಿಸಿದ್ದಾರೆ. ನೀವು ನನ್ನ ಬ್ಯಾಟಿಂಗ್ ನೋಡಿದ್ದರೆ, ಹೀಗೆ ಬಿರುಸಾಗಿ ಬ್ಯಾಟ್ ಬೀಸುತ್ತಿರಲಿಲ್ಲ. ನೀವೊಬ್ಬ ಅಸಾಧಾರಣ ಆಟಗಾರ. ಭಾರತ ತಂಡದ ಆಧಾರ. ಬ್ಯಾಟಿಂಗ್ ಅನ್ನು ನಾವು ದೂರದಿಂದಲೇ ಆನಂದಿಸುತ್ತೇವೆ. ಇನ್ನೂ ಉತ್ತಮ ಇನ್ನಿಂಗ್ಸ್ಗಳು ಮೂಡಿಬರಲಿ ಎಂದು ಹೇಳಿದರು.
ಒತ್ತಡ ಸಹಜ, ಎಲ್ಲವನ್ನೂ ಮೀರಬೇಕು: ಇನ್ನು, ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿ, ನಾವು ಮೈದಾನದಲ್ಲಿ ಬ್ಯಾಟ್ ಮಾಡುವಾಗ ಒತ್ತಡ ಸಹಜವಾಗಿರುತ್ತದೆ. ಪ್ರತಿ ಪಂದ್ಯವೂ ಸವಾಲಿನದ್ದಾಗಿರುತ್ತದೆ. ತಯಾರಿ ನಡೆಸುವಾಗ ನಮ್ಮ ಮೇಲಿರುವ ಒತ್ತಡಗಳೇ ನಮ್ಮನ್ನು ಪಕ್ವವನ್ನಾಗಿ ಮಾಡುತ್ತವೆ. ಹಾಗಿದ್ದಾಗ ಮಾತ್ರ ಆಟ ಉತ್ತಮವಾಗಿರುತ್ತದೆ. ಕಠಿಣ ಸವಾಲು ಎದುರಿಸಿದಾಗಲೇ ಬ್ಯಾಟ್ ಮೊನಚಾಗುತ್ತದೆ. ಗುಣಮಟ್ಟದ ಅಭ್ಯಾಸ ಪಂದ್ಯದ ವೇಳೆ ನೆರವಿಗೆ ಬರುತ್ತದೆ ಎಂದು ಹೇಳಿದರು.
ಇನ್ನು ಪಂದ್ಯದ ಕುರಿತು ಮಾತನಾಡಿದ ಸೂರ್ಯ, ಬೌಂಡರಿ ಗೆರೆಯನ್ನು ಗಮನದಲ್ಲಿಸಿಕೊಂಡು ನಾನು ಬ್ಯಾಟಿಂಗ್ ಮಾಡುತ್ತೇನೆ. 50- 60 ಮೀಟರ್ ಅಂಗಳದಲ್ಲಿ ಬೌಂಡರಿಗಿಂತಲೂ ಸಿಕ್ಸರ್ಗಳನ್ನು ಬಾರಿಸುವೆ. ಇಲ್ಲಿಯೂ ಪಿಚ್ ಸ್ವಲ್ಪ ಚಿಕ್ಕದಿದ್ದ ಕಾರಣ ಬಲವಾದ ಹೊಡೆತಗಳಿಗೆ ಕೈಹಾಕಿದೆ. ಕೆಲವೊಂದು ಶಾಟ್ಗಳನ್ನು ಮೊದಲೇ ನಿರ್ಧರಿಸಿ ಆಡುವೆ ಎಂದು ಉಸುರಿದರು.
ಹೊಡೆತಗಳ ನಿರ್ಧರಿಸುವೆ: ಮೈದಾನದ ಫೀಲ್ಡರ್ಗಳನ್ನು ಗುರಿಯಾಗಿಸಿಕೊಂಡು ಬಾಲ್ ಎದುರಿಸುವೆ. ಯಾವುದೇ ಪ್ರಯತ್ನವೂ ವಿಫಲವಾಗಬಾರದು ಎಂದು ಹೊಡೆತ ಆಯ್ದುಕೊಳ್ಳುವೆ. ನನ್ನ ನಿರ್ಭೀತಿಯ ಆಟಕ್ಕೆ ತಂಡ ಮತ್ತು ಕೋಚ್ ದ್ರಾವಿಡ್ರ ಬೆಂಬಲವಿದೆ. ಹೀಗಾಗಿ ಉತ್ತಮ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.
ಸೂರ್ಯಕುಮಾರ್ ಯಾದವ್ ಅವರ ವೀರಾವೇಶದ ಬ್ಯಾಟಿಂಗ್ನಿಂದಾಗ ಭಾರತ 3ನೇ ಟಿ20ಯಲ್ಲಿ ಶ್ರೀಲಂಕಾವನ್ನು 91 ರನ್ಗಳಿಂದ ಸೋಲಿಸುವ ಮೂಲಕ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಓದಿ: 'ಭಾರತ ತಂಡಕ್ಕೆ ಈತನೊಬ್ಬ ಸಾಕು...': ಸಿಡಿಲಮರಿ ಸೂರ್ಯಕುಮಾರ್ಗೆ ವಿಶ್ವಕ್ರಿಕೆಟ್ ಬಹುಪರಾಕ್