ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಮುಂಬೈನಲ್ಲಿ ನಡೆಯಲಿರುವ ನಿರ್ಣಾಯಕ ಸೆಮಿಫೈನಲ್‌ಗೆ ಮೊದಲು ಟೀಮ್‌ನಲ್ಲಿರುವ ಯಾವುದೇ ಆಟಗಾರರಿಗೆ ವಿಶ್ರಾಂತಿ ನೀಡುವುದನ್ನು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಳ್ಳಿಹಾಕಿದ್ದಾರೆ. ನೆದರ್ಲೆಂಡ್ಸ್ ವಿರುದ್ಧ ನಾಳೆ (ಭಾನುವಾರ) ನಡೆಯಲಿರುವ ಔಪಚಾರಿಕ ಪಂದ್ಯದಲ್ಲಿ ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಪಂದ್ಯಕ್ಕೂ ಮುನ್ನಾದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾವು ಕಳೆದ ಪಂದ್ಯದ ನಂತರ ಆರು ದಿನಗಳ ರಜೆ ಅನುಭವಿಸಿದ್ದೇವೆ. ಆದ್ದರಿಂದ, ನಾವು ಉತ್ತಮ ವಿಶ್ರಾಂತಿ ಪಡೆದುಕೊಂಡಿದ್ದೇವೆ ಮತ್ತು ಆಟಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಂಡದ ಆಟಗಾರರಿಗೆ ವಿಶ್ರಾಂತಿಯ ಅಗತ್ಯ ಇಲ್ಲ. ಸೆಮೀಸ್ಗೆ ಒಂದು ಪಂದ್ಯ ಹಿಂದೆ ಇರುವಾಗ ಇಂತಹ ನಿರ್ಧಾರ ಸರಿ ಇರುವುದಿಲ್ಲ. ತಂಡ ಸಂಪೂರ್ಣ ಫಿಟ್ ಆಗಿದೆ ಹೀಗಾಗಿ ಯಾವುದೇ ಬದಲಾವಣೆ ಅಗತ್ಯ ಕಂಡು ಬರುವುದಿಲ್ಲ" ಎಂದಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲಾಗಿ ನಾಲ್ಕನೇ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರ್ಪಡೆ ಆಗಿರುವುದರಿಂದ ಬೌಲಿಂಗ್ ಬದಲಾವಣೆ ನಿರೀಕ್ಷೆಯ ಬಗ್ಗೆ ಕೇಳಲಾದ ಪ್ರಶ್ನಗೆ, "ಈಗ ಟೂರ್ನಮೆಂಟ್‌ನಲ್ಲಿ ಪಾಯಿಂಟ್‌ನ ತುದಿಯಲ್ಲಿದ್ದೀರಿ. ಈ ಹಂತದ ವರೆಗೆ ಒಂದೇ 11 ಹುಡುಗರ ಜೊತೆ ಆಡಿದ್ದೇವೆ. ಎಲ್ಲಾ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗಿದ್ದಾರೆ. ಅವರಿಂದ ಇನ್ನಷ್ಟು ಉತ್ತಮ ಪ್ರದರ್ಶನ ನಿರೀಕ್ಷಿಸುತ್ತೇವೆ, ಅದರತ್ತ ಗಮನ ಹರಿಸುತ್ತೇವೆ. ಸೆಮೀಸ್ ಮತ್ತು ಫೈನಲ್ಸ್ ಬಗ್ಗೆ ಆಶಾದಾಯಕವಾಗಿದ್ದೇವೆ" ಎಂದರು.
ದೇಶದ ಎಂಟು ಮೈದಾನದಲ್ಲಿ ತಂಡ ಅಲ್ಲಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಿದೆ ಎಂದು ಈ ವೇಳೆ ಕೋಚ್ ದ್ರಾವಿಡ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ನಾವು ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ನಮ್ಮ ತೀವ್ರತೆಯು ಮುಂದುವರಿಯುತ್ತಿದೆ. ನಾವು ಈ ದೇಶದ ಉದ್ದ ಮತ್ತು ಅಗಲವನ್ನು ಪ್ರಯಾಣಿಸಿದ್ದೇವೆ ಮತ್ತು ಎಂಟು ಸ್ಥಳಗಳಲ್ಲಿ ಆಡಿದ್ದೇವೆ. ಇದು ನಮ್ಮ ಒಂಬತ್ತನೇ ಸ್ಥಳವಾಗಿದೆ. ಈ ತಂಡವು ನಿಜವಾಗಿಯೂ ಉತ್ತಮವಾಗಿ ಆಡಿದ್ದೇವೆ ಹಾಗೇ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ತಂಡ ಬ್ರಾಂಡ್ ಕ್ರಿಕೆಟ್‌ನಲ್ಲಿ ಆಡಿದೆ" ಎಂದಿದ್ದಾರೆ.
ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ದ್ರಾವಿಡ್, "ರೋಹಿತ್ ಶರ್ಮಾ ತಂಡಕ್ಕೆ ನೀಡಿದ ಕೆಲವು ಆರಂಭಗಳು, ಸಂಕಷ್ಟದ ಸಮಯದಲ್ಲಿ ನಿಂತು ಆಡಿದ ಪ್ರದರ್ಶನ ಉತ್ತಮವಾಗಿತ್ತು. ಕೆಲವು ಕಠಿಣ ಪಿಚ್ಗಳಲ್ಲೂ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಆರಂಭದಲ್ಲಿ ಅವರ ಆಟವನ್ನು ಕಂಡ ಕೋಚಿಂಗ್ ಸಿಬ್ಬಂದಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಅವರ ಇನ್ನಿಂಗ್ಸ್ಗಳು ಪಂದ್ಯದ ಮೇಲೆ ಈ ವರೆಗೂ ನೇರವಾಗಿ ಪ್ರಭಾವ ಬೀರಿದೆ" ಎಂದು ಪ್ರದರ್ಶನವನ್ನು ಶ್ಲಾಘಿಸಿದರು.
ಟೀಮ್ ಇಂಡಿಯಾ ಮೊದಲ ಐದು ಪಂದ್ಯದಲ್ಲಿ ಚೇಸಿಂಗ್ ಮಾಡಿ ಗೆದ್ದರೆ, ಮತ್ತೆ ಮೂರರನ್ನು ಮೊದಲು ಬ್ಯಾಟಿಂಗ್ ಮಾಡಿ ಬೌಲಿಂಗ್ನಿಂದ ಗೆಲುವು ಸಾಧಿಸಿದೆ. ಈ ಬಗ್ಗೆ ಪ್ರಸ್ತಾಪ ಮಾಡಿದ ದ್ರಾವಿಡ್ ತಂಡ ಬರೀ ಚೇಸಿಂಗ್ನಲ್ಲಿ ಬಲಿಷ್ಠ ಎಂದಲ್ಲಾ ಎರಡೂ ರೀತಿಯ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಹೇಳುವ ಮೂಲಕ, ಟೀಂ ಇಂಡಿಯಾ ಟೂರ್ನಿಯಲ್ಲಿ ಆಲ್ರೌಂಡ್ ಆಟ ಆಡಿದೆ ಎಂದಿದ್ದಾರೆ.
ಇದನ್ನೂ ಓದಿ: ಸೆಮೀಸ್ ರೇಸ್ನಿಂದ ಪಾಕ್ ಹೊರಕ್ಕೆ: ಭಾರತ vs ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ನಡುವೆ ಪಂದ್ಯ