ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ನೇಮಕವಾಗಲಿದ್ದಾರೆ ಎಂಬ ಕುರಿತು ವರದಿಯಾಗಿತ್ತು. ಆದರೆ, ಈ ಕುರಿತು ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಇದೀಗ ಕೋಚ್ ಹುದ್ದೆಗೆ ದ್ರಾವಿಡ್ ಅರ್ಜಿ ಸಲ್ಲಿಸಿದ್ದು, ದ್ರಾವಿಡ್ ನಿರ್ವಹಿಸಿದ್ದ ಎನ್ಸಿಎ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ನೇಮಕವಾಗಲಿದ್ದಾರೆ .
ಟಿ-20 ವಿಶ್ವಕಪ್ ಬಳಿಕ ಭಾರತ ತಂಡದ ಕೋಚ್ ಹುದ್ದೆ ತೆರವಾಗಲಿದ್ದು, ದ್ರಾವಿಡ್ ಹೊರತುಪಡಿಸಿ ಬೇರೆ ಯಾರೊಬ್ಬರ ಹೆಸರೂ ಸಹ ಕೋಚ್ ಹುದ್ದೆಗೆ ಕೇಳಿಬಂದಿರಲಿಲ್ಲ. ಮೂಲಗಳ ಪ್ರಕಾರ ದ್ರಾವಿಡ್ ಹೆಸರು ಅಂತಿಮವಾಗಿದ್ದು, ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಉಳಿದಿದೆ.
ಬಿಸಿಸಿಐ ನಿಯಮದಂತೆ ತೆರವಾದ ಹುದ್ದೆಗೆ ಅರ್ಜಿ ಸಲ್ಲಿಸದೆಯೇ ನೇರವಾಗಿ ನೇಮಕ ಮಾಡುವಂತಿಲ್ಲ. ಹೀಗಾಗಿ ರಾಹುಲ್ ದ್ರಾವಿಡ್ ಒಬ್ಬರ ಹೆಸರು ಮಾತ್ರ ಕೋಚ್ ಹುದ್ದೆಗೆ ಶಿಫಾರಸ್ಸಾಗಿದ್ದರೂ ಅರ್ಜಿ ಸಲ್ಲಿಸಬೇಕಾಗಿದೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದಾಗಿ ರಾಹುಲ್ ಇಂದು ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಬೌಲಿಂಗ್ ಕೋಚ್ ಪಾರಸ್ (ಮಾಂಬ್ರೆ) ಮತ್ತು ಫೀಲ್ಡಿಂಗ್ ಕೋಚ್ ಅಭಯ್ (ಶರ್ಮಾ) ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿ ಕೇವಲ ಔಪಚಾರಿಕವಾಗಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಹುದ್ದೆ ಖಾಲಿಯಾಗುವುದರಿಂದ ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮತ್ತೆ ಕಣಕ್ಕೆ ಮರಳಬಹುದು.
ಲಕ್ಷ್ಮಣ್ ಆಯ್ಕೆ ಖಚಿತವಾದರೆ ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನ ಮಾರ್ಗದರ್ಶಕರಾಗಿ ಮುಂದುವರಿಯುವುದಿಲ್ಲ ಮತ್ತು ಖಾಸಗಿ ಮಾಧ್ಯಮಗಳಲ್ಲಿ ಕಾಮೆಂಟರಿ ಸೇರಿ ಚರ್ಚೆಗಳಲ್ಲಿ ಭಾಗಿಯಾಗುವಂತಿಲ್ಲ. ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಹುದ್ದೆಗೇರುವುದಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ICC T - 20 ವಿಶ್ವಕಪ್: ದಕ್ಷಿಣ ಆಫ್ರಿಕಾ ತಂಡಕ್ಕೆ 144 ರನ್ ಟಾರ್ಗೆಟ್ ನೀಡಿದ ಕೆರಿಬಿಯನ್ ಪಡೆ