ಲಂಡನ್ : ಅತಿಥೇಯ ಆಂಗ್ಲರ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ ತಂಡದ ಪರ ಆಡಲು ಅವಕಾಶ ಪಡೆದಿರುವ ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸಮರ್ಸೆಟ್ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಆಂಗ್ಲರಿಗೆ ಎಚ್ಚರಿಕೆ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 43 ಓವರ್ ಮಾಡಿ ಕೇವಲ ಒಂದೇ ವಿಕೆಟ್ ಪಡೆದಿದ್ದ ಅಶ್ವಿನ್ ಪದ್ರದರ್ಶನ ಭಾರತೀಯರಿಗೆ ಆಘಾತವನ್ನುಂಟು ಮಾಡಿತ್ತು. ಮುಂದಿನ ತಿಂಗಳು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿರುವುದರಿಂದ ಅಶ್ವಿನ್ ನೀರಸ ಪ್ರದರ್ಶನ ಭಾರತೀಯ ಪಾಳಯದಲ್ಲಿ ಚಿಂತೆಯನ್ನುಂಟು ಮಾಡಿತ್ತು. ಆದರೆ, ಬುಧವಾರ ಅದ್ಭುತ ಪ್ರದರ್ಶನ ತೋರಿ ಪಂದ್ಯದ ಗತಿಯನ್ನು ಬದಲಾಯಿಸಿರುವುದರಿಂದ ಕೊಹ್ಲಿ ಪಡೆಯ ಚಿಂತೆಯನ್ನು ದೂರ ಮಾಡಿದೆ.
ಅಶ್ವಿನ್ ಬಲಿಷ್ಟ ಬ್ಯಾಟಿಂಗ್ ಲೈನ್ ಅಪ್ ಇರುವ ಸಮರ್ಸೆಟ್ ತಂಡದ 6 ಪ್ರಮುಖ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗಟ್ಟುವ ಮೂಲಕ ಕೇವಲ 69ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬಲಗೈ ಆಫ್ ಸ್ಪಿನ್ನರ್ 15 ಓವರ್ಗಳಲ್ಲಿ ಕೇವಲ 27 ರನ್ ನೀಡಿ 6 ವಿಕೆಟ್ ಪಡೆದರೆ, ಎಡಗೈ ಸ್ಪಿನ್ನರ್ ಡೇನಿಯಲ್ ಮೊರಿಯಾರ್ಟಿ 20 ರನ್‌ಗೆ 4 ವಿಕೆಟ್ ಪಡೆದು ಮಿಂಚಿದರು. ಇಂದು ಕೊನೆಯ ದಿನವಾಗಿದ್ದು, ಸರ್ರೆ 57 ಓವರ್ಗಳಲ್ಲಿ 258 ರನ್ಗಳ ಗುರಿ ಬೆನ್ನತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 8ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ನಾಟಿಂಗ್ಹ್ಯಾಮ್ನಲ್ಲಿ ನಡೆಯಲಿದೆ. 2ನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ಆಗಸ್ಟ್ 12ರಿಂದ 16ರವರೆಗೆ, ಮೂರನೇ ಟೆಸ್ಟ್ ಲೀಡ್ಸ್ನಲ್ಲಿ ಆಗಸ್ಟ್ 25ರಿಂದ 29ರವರೆಗೆ, ನಾಲ್ಕನೇ ಟೆಸ್ಟ್ ಸೆಪ್ಟೆಂಬರ್ 2ರಿಂದ 6ರವರೆಗೆ ಮತ್ತು ಕೊನೆಯ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ ಸೆಪ್ಟೆಂಬರ್ 10ರಿಂದ 14ರವರೆಗೆ ನಡೆಯಲಿದೆ.
ಇದನ್ನು ಓದಿ:2ನೇ ಟೆಸ್ಟ್ ಚಾಂಪಿಯನ್‌ಶಿಪ್: ಅಂಕ ವಿಭಜನೆಯಲ್ಲಿ ಪ್ರಮುಖ ಬದಲಾವಣೆ ಮಾಡಿದ ಐಸಿಸಿ