ಬೆಂಗಳೂರು : ಭಾರತದ ತಂಡದ ಪ್ರಧಾನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶ್ರೀಲಂಕಾ ವಿರುದ್ಧದ ಅಹರ್ನಿಶಿ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆಯುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ರನ್ನು ಹಿಂದಿಕ್ಕಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಲ್ರೌಂಡರ್ ಧನಂಜಯ ಡಿಸಿಲ್ವಾ ವಿಕೆಟ್ ಪಡೆಯುವ ಮೂಲಕ ತಮ್ಮ ವಿಕೆಟ್ಗಳ ಸಂಖ್ಯೆಯನ್ನು 440ಕ್ಕೆ ಏರಿಸಿಕೊಂಡರು. ಈ ಮೂಲಕ ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಎನಿಸಿಕೊಂಡರು.
ಈ ಸರಣಿಯಲ್ಲಿ ಅಶ್ವಿನ್ ದಿಗ್ಗಜರಾದ ಕಪಿಲ್ದೇವ್(434), ರಿಚರ್ಡ್ ಹ್ಯಾಡ್ಲಿ(431), ರಂಗನಾ ಹೆರಾತ್(433)ರನ್ನು ಹಿಂದಿಕ್ಕಿದ್ದರು. ಇದೀಗ ಡೇಲ್ ಸ್ಟೇನ್(439)ರನ್ನು ಹಿಂದಿಕ್ಕಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ಮುರಳೀಧರನ್ 800 ವಿಕೆಟ್ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್(708), ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(640), ಭಾರತದ ಅನಿಲ್ ಕುಂಬ್ಳೆ(619), ಆಸ್ಟ್ರೇಲಿಯಾದ ಗ್ಲೇನ್ ಮೆಗ್ಗ್ರಾತ್(563), ಇಂಗ್ಲೆಂಡ್ ಸ್ಟುವರ್ಟ್ ಬ್ರಾಡ್(537) ವಿಂಡೀಸ್ನ ಕರ್ಟ್ನಿ ವಾಲ್ಶ್(519) ಮಾತ್ರ ಅಶ್ವಿನ್ಗಿಂತ ಮುಂದಿದ್ದಾರೆ.
ಇದನ್ನೂ ಓದಿ:ರಣಜಿಯಲ್ಲಿ 266 ರನ್ ಸಿಡಿಸಿ ವಿಶ್ವದಾಖಲೆ ಬರೆದ 17 ವರ್ಷದ ಜಾರ್ಖಂಡ್ ಬ್ಯಾಟರ್ ಕುಶಾಗ್ರ