ಡರ್ಬಿ : ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೌಂಟಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಆಕರ್ಷಕ ದ್ವಿಶಕ ಸಾಧನೆ ಮಾಡುವ ಮೂಲಕ ತಮ್ಮ 2 ವರ್ಷಗಳ ಶತಕದ ಬರವನ್ನು ಕೊನೆಗೂ ನೀಗಿಸಿಕೊಂಡಿದ್ದಾರೆ. ಅಲ್ಲದೆ ಕೌಂಟಿ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕಳಪೆ ಫಾರ್ಮ್ನಿಂದ ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಪೂಜಾರ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡುವುದಕ್ಕೆ ಸಾಕಷ್ಟು ಹರಸಾಹಸ ಮಾಡುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿದ್ದ ಪೂಜಾರ ಇದೀಗ ಕೌಂಟಿ ಕ್ರಿಕೆಟ್ನಲ್ಲಿ ಸಸೆಕ್ಸ್ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅಜೇಯ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡರ್ಬಿಶೈರ್ 505 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಈ ಮೊತ್ತವನ್ನು ಬೆನ್ನಟಿದ ಸಸೆಕ್ಸ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 174 ರನ್ಗಳಿಗೆ ಆಲೌಟ್ ಆಗಿತ್ತು. ಪೂಜಾರ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ 15 ಎಸೆತಗಳಲ್ಲಿ 6 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭಿವಿಸಿದ್ದರು.
ಆದರೆ, 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ 387 ಎಸೆತಗಳಲ್ಲಿ ಅಜೇಯ 201 ರನ್ಗಳಿಸಿ ಮಿಂಚಿದರು. ಅವರ ಈ ಆಕರ್ಷಕ ಇನ್ನಿಂಗ್ಸ್ನಲ್ಲಿ 23 ಬಾರಿ ಚೆಂಡನ್ನು ಬೌಂಡರಿ ಮುಟ್ಟಿಸಿದ್ದರು. ಅಲ್ಲದೆ ನಾಯಕ ಹೇನ್ಸ್(243) ಜೊತೆಗೆ 3ನೇ ವಿಕೆಟ್ ಮುರಿಯದ 351 ರನ್ಗಳ ಜೊತೆಯಾಟ ನೀಡಿದರು. ಇವರಿಬ್ಬರ ದ್ವಿಶತಕದಿಂದ ಸಸೆಕ್ಸ್ 176.1 ಓವರ್ಗಳಲ್ಲಿ 513 ರನ್ಗಳಿಸಿದರು. ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ಪೂಜಾರ ಈ ದ್ವಿಶತಕದ ಮೂಲಕ ಕೌಂಟಿ ಚಾಂಪಿಯನ್ಶಿಪ್ನಲ್ಲಿ ದ್ವಿಶತಕ ದಾಖಲಿಸಿದ ಭಾರತದ 2ನೇ ಕ್ರಿಕೆಟಿಗ ಎನಿಸಿಕೊಂಡರು. ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. 1991ರಲ್ಲಿ ಲೈಲೆಸ್ಟರ್ಶೈರ್ ವಿರುದ್ಧ 212 ಮತ್ತು 1994ರಲ್ಲಿ ಡುರ್ಹಾಮ್ ವಿರುದ್ಧ 205 ರನ್ಗಳಿಸಿದ್ದರು. ಎರಡೂ ಬಾರಿಯೂ ಡರ್ಬಿಶೈರ್ ಕೌಂಟಿ ತಂಡವನ್ನು ಪ್ರತಿನಿಧಿಸಿದ್ದರು.
ಪೂಜಾರ ಅಜೇಯ 201 ರನ್ಗಳಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೆಚ್ಚು ದ್ವಿಶತಕ(13) ಸಿಡಿಸಿ ಏಷ್ಯಾದ ಬ್ಯಾಟರ್ ಎಂಬ ದಾಖಲೆಯನ್ನು ಶ್ರೀಲಂಕಾದ ಲೆಜೆಂಡರಿ ಬ್ಯಾಟರ್ ಕುಮಾರ್ ಸಂಗಕ್ಕಾರ ಅವರ ಜೊತೆಗೆ ಹಂಚಿಕೊಂಡರು.
ಇದನ್ನೂ ಓದಿ:ಪುರುಷರ ಜರ್ಸಿಗೆ ಮರುಹೊಲಿಗೆ, ಸಮೋಸವೇ ಬ್ರೇಕ್‌ಫಾಸ್ಟ್! ಮಹಿಳಾ ಕ್ರಿಕೆಟಿಗರ ಯಾತನೆ ವಿವರಿಸಿದ ವಿನೋದ್ ರಾಯ್!