ಮುಂಬೈ: ಐಪಿಎಲ್ನ 15ನೇ ಆವೃತ್ತಿ ಈಗಾಗಲೇ ಕೆಲವು ಬೃಹತ್ ಸ್ಕೋರ್ ಪಂದ್ಯಗಳಿಗೆ ಸಾಕ್ಷಿಯಾಗಿದ್ದು, ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಆತಿಥ್ಯವಹಿಸಲು ಸಿದ್ಧವಾಗಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಅದ್ಭುತ ಆಟಗಾರರನ್ನು ಖರೀದಿಸಿ ತಂಡವನ್ನ ಬಲಿಷ್ಠ ಪಡಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ಆಡಿರುವ 2 ಪಂದ್ಯಗಳಲ್ಲೂ ಪ್ರಾಬಲ್ಯಯುತ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ್ದ ಸಾಮ್ಸನ್ ಬಳಗ, ಬ್ಯಾಟಿಂಗ್ನಲ್ಲಿ 210 ರನ್ ಸಿಡಿಸಿದರೆ, ಬೌಲಿಂಗ್ನಲ್ಲಿ ಹೈದರಾಬಾದ್ ತಂಡವನ್ನು ಕೇವಲ 149 ರನ್ಗಳಿಗೆ ಕಟ್ಟಿಹಾಕುವ ಮೂಲಕ 61 ರನ್ಗಳ ಜಯ ಸಾಧಿಸಿತ್ತು.
ಇನ್ನು 2ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧವೂ 193 ರನ್ ಸಿಡಿಸಿದ್ದಲ್ಲದೆ, ರೋಹಿತ್ ಬಳಗವನ್ನು 170ಕ್ಕೆ ಆಲೌಟ್ ಮಾಡಿ 23 ರನ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.
ಆರಂಭಿಕ ಜೋಶ್ ಬಟ್ಲರ್, ಸಂಜು ಸಾಮ್ಸನ್ ಅದ್ಭುತ ಫಾರ್ಮ್ನಲ್ಲಿದ್ದರೆ, ಯುವಕರಾದ ಪಡಿಕ್ಕಲ್, ಜೈಸ್ವಾಲ್ ಡೀಸೆಂಟ್ ಟಚ್ನಲ್ಲಿದ್ದಾರೆ. ಇನ್ನು ಹೆಟ್ಮಾಯರ್ ತಮ್ಮ ಫಿನಿಶರ್ ರೋಲ್ನಲ್ಲಿ ಎದುರಾಳಿಯ ನಿದ್ದೆಗೆಡಿಸಿದ್ದಾರೆ.
ಇನ್ನು ಬೌಲಿಂಗ್ನಲ್ಲಿ ಕನ್ನಡಿಗ ಪ್ರಸಿಧ್ ಕೃಷ್ಣ ಮತ್ತು ಕಿವೀಸ್ ವೇಗಿ ವೇಗಿ ಟ್ರೆಂಟ್ ಬೌಲ್ಟ್ ಆಡಿರುವ 2 ಪಂದ್ಯಗಳಲ್ಲೂ ಮಿಂಚಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಅನುಭವಿಗಳಾದ ಅಶ್ವಿನ್ ಮತ್ತು ಚಹಲ್ ತಂಡದ ಅತ್ಯುತ್ತಮ ಪ್ರದರ್ಶನ ತೋರಿ ಎರಡು ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ.
ಇತ್ತ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿ 205 ರನ್ ಗಳಿಸಿಯೂ ಸೋಲು ಕಂಡಿದ್ದ ಆರ್ಸಿಬಿ 2ನೇ ಪಂದ್ಯದಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿ ಬಲಿಷ್ಠ ಪಂಜಾಬ್ ತಂಡವನ್ನು ಕೇವಲ 128 ರನ್ಗಳಿಗೆ ನಿಯಂತ್ರಿಸಿ ಜಯ ಸಾಧಿಸಿತ್ತು.
ಆದರೆ, ಮೊದಲ ಪಂದ್ಯದಲ್ಲಿ ಬೌಲಿಂಗ್ ಕೈಕೊಟ್ಟರೆ, 2ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 129ರನ್ಗಳ ಸಾಧಾರಣ ಗುರಿಯನ್ನು 7 ವಿಕೆಟ್ ಕಳೆದುಕೊಂಡು ತಲುಪಿತ್ತು. ಹಾಗಾಗಿ 3ನೇ ಪಂದ್ಯದಲ್ಲಿ ತಂಡದ ವೈಫಲ್ಯಗಳನ್ನು ಸರಿದೂಗಿಸಿಕೊಂಡು ಡುಪ್ಲೆಸಿಸ್ ಬಳಗ ಹೊಸ ಯೋಜನೆಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ಆರ್ಸಿಬಿ ತಂಡ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವುದರಿಂದ ಈ ಪಂದ್ಯದಲ್ಲೂ ಅದೇ ತಂಡ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಬದಲಾವಣೆ ಬಯಸಿದರೆ ಕಳೆದ ಎರಡೂ ಪಂದ್ಯಗಳಲ್ಲೂ ಆರಂಭಿಕನಾಗಿ ಕಣಕ್ಕಿಳಿದು ವೈಫಲ್ಯ ಅನುಭಿಸಿರುವ ಅನುಜ್ ರಾವತ್ ಈ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಕಡಿಮೆಯಿದೆ.
ಒಂದು ವೇಳೆ ಯುವ ಆಟಗಾರ ಅಂತಿಮ ಅವಕಾಶ ನೀಡಲು ಬಯಸದಿದ್ದರೆ ಕೊಹ್ಲಿ ಅಥವಾ ಫಿನ್ ಅಲೆನ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಡೇವಿಡ್ ವಿಲ್ಲೆ ಅಥವಾ ರುದರ್‌ಫೋರ್ಡ್ ತಂಡದಿಂದ ಹೊರಗುಳಿಯಬಹುದು.
ಮುಖಾಮುಖಿ: ಆರ್ಸಿಬಿ ಮತ್ತು ರಾಯಲ್ಸ್ ಐಪಿಎಲ್ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್ಆರ್ 12-10ರಲ್ಲಿ ಮುನ್ನಡೆ ಸಾಧಿಸಿದೆ. 2 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಸಂಭಾವ್ಯ ಆಡುವ 11ರ ಬಳಗ: ಆರ್ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (ವಿಕೀ), ಶೆರ್ಫಾನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂಡು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ರಾಜಸ್ಥಾನ್ ರಾಯಲ್ಸ್ :ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಪ್ರಸಿಧ್ ಕೃಷ್ಣ
ಇದನ್ನೂ ಓದಿ:ಲಖನೌ 'ಆವೇಶ'ಕ್ಕೆ ಒಲಿದ ಗೆಲುವು; ಹೈದರಾಬಾದ್‌ಗೆ ಸತತ 2ನೇ ಸೋಲು