ಅಹ್ಮದಾಬಾದ್ : ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ 2ನೇ ಏಕದಿನ ಪಂದ್ಯ ನಡೆಯಲಿದೆ. ಭಾರತ ತಂಡ ತನ್ನ ಪ್ರಾಬಲ್ಯಯುತ ಪ್ರದರ್ಶನವನ್ನು ಮುಂದುವರಿಸಿ ಸರಣಿ ವಶಪಡಿಸಿಕೊಳ್ಳುವತ್ತ ಗಮನ ಹರಿಸಿದೆ.
ಮೊದಲ ಪಂದ್ಯದಲ್ಲಿ ಭಾರತೀಯ ಸ್ಪಿನ್ದ್ವಯರಾದ ಯಜ್ವೇಂದ್ರ ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ವಿಂಡೀಸ್ ತಂಡವನ್ನು ಕೇವಲ 176ಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರೆ, ನಾಯಕ ರೋಹಿತ್ ಶರ್ಮಾ ಸ್ಫೋಟಕ 60 ರನ್ಗಳ ನೆರವಿನಿಂದ 6 ವಿಕೆಟ್ಗಳ ರೋಚಕ ಜಯ ಸಾಧಿಸಿ ಭಾರತಕ್ಕೆ 1-0ಯಲ್ಲಿ ಸರಣಿ ಮುನ್ನಡೆ ತಂದುಕೊಟ್ಟಿದ್ದರು.
ದಕ್ಷಿಣ ಆಫ್ರಿಕಾ ನೆಲದಲ್ಲಿ ವೈಟ್ವಾಷ್ ಮುಖಭಂಗಕ್ಕೆ ಒಳಗಾಗಿರುವ. ಆದರೆ, ಆ ಸರಣಿಯನ್ನು ಮಿಸ್ ಮಾಡಿಕೊಂಡಿದ್ದ ರೋಹಿತ್ ಶರ್ಮಾ ಇದೀಗ ಕಮ್ಬ್ಯಾಕ್ ಮಾಡಿದ್ದು, ನಾಯಕನಾಗಿ ಭಾರತ ತಂಡ ಹೊಸ ಹುರುಪಿನೊಂದಿಗೆ ಮುನ್ನಡೆಸುತ್ತಿದ್ದಾರೆ.
ರಾಹುಲ್ ಕಮ್ಬ್ಯಾಕ್ : ಮೊದಲ ಪಂದ್ಯದ ವೇಳೆ ವಿಶ್ರಾಂತಿಯಲ್ಲಿದ್ದ ಉಪನಾಯಕ ಕೆ ಎಲ್ ರಾಹುಲ್, 2ನೇ ಪಂದ್ಯಕ್ಕೆ ಲಭ್ಯರಿರಲಿದ್ದಾರೆ. ಆದರೆ, ಅವರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೋ ಅಥವಾ ಎಂದಿನಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಒಂದು ವೇಳೆ ಅವರು ಆರಂಭಿಕನಾಗಿ ಕಣಕ್ಕಿಳಿದರೆ ಜಾರ್ಖಂಡ್ ಬ್ಯಾಟರ್ ಇಶಾನ್ ಕಿಶನ್ ತಂಡದಿಂದ ಹೊರ ಬೀಳಬೇಕಾಗುತ್ತದೆ. ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದರೆ, ಆಲ್ರೌಂಡರ್ ದೀಪಕ್ ಹೂಡಾ ಜಾಗ ಬಿಟ್ಟು ಕೊಡಬೇಕಾಗುತ್ತದೆ. ರಾಹುಲ್ ಆಡುವುದು ಖಚಿತ. ಆದ್ರೆ, ಅವರಿಗೆ ಜಾಗ ಯಾರು ಬಿಡುತ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿಯಾಗಿದೆ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಿಲ್ಲ: ಬ್ಯಾಟಿಂಗ್ ವಿಭಾಗದಲ್ಲಿ ಒಂದೆರಡು ಬದಲಾವಣೆಯಾದರೂ ಆಗಬಹುದು. ಆದರೆ, ಬೌಲಿಂಗ್ನಲ್ಲಿ ಬದಲಾವಣೆ ಅಸಾಧ್ಯ. ಏಕೆಂದರೆ, ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ಗಳ ದಂಡೇ ಹೊಂದಿರುವ ವಿಂಡೀಸ್ ತಂಡವನ್ನು 176ಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಒಂದು ವೇಳೆ ಬದಲಾವಣೆ ಮಾಡಬೇಕೆಂದರೆ ಒಬ್ಬ ವೇಗಿಯ ಬದಲಿ ಅವಕಾಶಕ್ಕಾಗಿ ಕಾಯುತ್ತಿರುವ ಚೈನಾಮೆನ್ ಕುಲ್ದೀಪ್ಗೆ ಅವಕಾಶ ಕೊಡಬಹುದು. ಆದರೆ, ಸಾಧ್ಯತೆ ಕಡಿಮೆಯಿದೆ.
ಇದನ್ನೂ ಓದಿ:ಮ್ಯಾನೇಜ್ಮೆಂಟ್ ಬಯಸಿದರೆ ಬೌಲಿಂಗ್ ಮಾಡಲು ಸಿದ್ಧ: ಸೂರ್ಯಕುಮಾರ್ ಯಾದವ್
ಇತ್ತ ಕಳೆದ 16 ಪಂದ್ಯಗಳಲ್ಲಿ 10ರಲ್ಲಿ 50 ಓವರ್ ಪೂರ್ಣಗೊಳಿಸುವಲ್ಲಿ ವಿಫಲರಾಗಿರುವ ವೆಸ್ಟ್ ಇಂಡೀಸ್ ತಮ್ಮ ಬ್ಯಾಟಿಂಗ್ ವಿಭಾಗವನ್ನು ಸುಧಾರಿಸಿಕೊಳ್ಳುವುದರತ್ತ ಗಮನ ಹರಿಸಿದೆ. ಕಳೆದ ಪಂದ್ಯದಲ್ಲಿ ನಾಯಕ ಪೊಲಾರ್ಡ್ ಸೇರಿದಂತೆ ಬ್ಯಾಟರ್ಗಳು ಭಾರತೀಯ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಕುಸಿತ ಕಂಡಿತ್ತು. ಜೇಸನ್ ಹೋಲ್ಡರ್ ಮಾತ್ರ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. 2ನೇ ಪಂದ್ಯದಲ್ಲಿ ಅವರ ಜೊತೆಗೆ ಇತರೆ ಬ್ಯಾಟರ್ಗಳು ಕೈಜೋಡಿಸಿದರೆ, ಬಲಿಷ್ಠ ಭಾರತ ತಂಡಕ್ಕೆ ತಕ್ಕಮಟ್ಟಿಗಾದರೂ ಪೈಪೋಟಿ ನೀಡಬಹುದಾಗಿದೆ.
ಭಾರತ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್-ಕೀಪರ್), ದೀಪಕ್ ಹೂಡಾ , ರಿಷಬ್ ಪಂತ್ (ವಿಕೆಟ್-ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಶಾರುಖ್ ಖಾನ್.
ವೆಸ್ಟ್ ಇಂಡೀಸ್ : ಕೀರಾನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್ಕ್ರುಮಾ ಬೊನ್ನರ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಪರ್ಡ್, ಒಡೆನ್ ಸ್ಮಿತ್, ಹೇಡನ್ ವಾಲ್ಶ್ ಜೂ.