ಬೆಂಗಳೂರು : ಭಾರತ ತಂಡದ ವೇಗದ ಬೌಲರ್ ಪ್ರಸಿಧ್ ಕೃಷ್ಣ ಕೋವಿಡ್-19ನಿಂದ ಚೇತರಿಸಿಕೊಂಡಿದ್ದು ನಾಳೆ ಮುಂಬೈನಲ್ಲಿರುವ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಐಪಿಎಲ್ ರದ್ದಾಗುತ್ತಿದ್ದಂತೆ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಪ್ರಸಿಧ್ಗೆ ಕೋವಿಡ್-19 ಪಾಸಿಟಿವ್ ಕಾಣಿಸಿತ್ತು. ನಂತರ ಚೇತರಿಸಿಕೊಂಡಿದ್ದ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಹೆಚ್ಚುವರಿ ಬೌಲರ್ ಆಗಿ ಆಯ್ಕೆ ಮಾಡಲಾಗಿದೆ. ಹಾಗಾಗಿ, ಮೇ 23ರಂದು ಮುಂಬೈಗೆ ತೆರಳಲಿದ್ದು, ಅಲ್ಲಿ ಒಂದು ವಾರ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ.
ಅವರು (ಕೃಷ್ಣ) ಕೋವಿಡ್-19ನಿಂದ ಸಂಪೂರ್ಣವಾಗಿ ಚೇತಸಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಅವರ ಮನೆಯಲ್ಲಿರುವ ಅವರು ಮೇ 23ರಂದು ಮುಂಬೈಗೆ ಬಂದು ಸೇರಲಿದ್ದಾರೆ ಎಂದು ಐಎಎನ್ಎಸ್ಗೆ ಬಿಸಿಸಿಐ ಮೂಲ ಹೇಳಿದೆ.
ಇಂಗ್ಲೆಂಡ್ಗೆ ಆಯ್ಕೆ ಮಾಡಲಾಗಿರುವ 4 ಹೆಚ್ಚುವರಿ ಕ್ರಿಕೆಟಿಗರಲ್ಲಿ ಪ್ರಸಿಧ್ ಕೂಡ ಒಬ್ಬರಾಗಿದ್ದಾರೆ. ಇವರ ಜೊತೆ ಆವೇಶ್ ಖಾನ್, ಅರ್ಜಾನ್ ನಾಗ್ವಾಸ್ವಾಲಾ ಮತ್ತು ಅಭಿಮನ್ಯು ಈಶ್ವರನ್ ಕೂಡ ತಂಡದ ಜೊತೆಯಲ್ಲಿರಲಿದ್ದಾರೆ.
ಕೃಷ್ಣ ಜೊತೆಗೆ ಕೆಕೆಆರ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಮತ್ತು ನ್ಯೂಜಿಲ್ಯಾಂಡ್ನ ಟಿಮ್ ಸೀಫರ್ಟ್ಗೂ ಕೂಡ ಕೊರೊನಾ ವೈರಸ್ ತಗುಲಿತ್ತು. ಪ್ರಸ್ತುತ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಸೀಫರ್ಟ್ ತವರಿಗೂ ಮರಳಿದ್ದಾರೆ.
ಇದನ್ನು ಓದಿ: ಹೀಗಾದ್ರೆ... ಆಂಗ್ಲರ ವಿರುದ್ಧ ಭಾರತ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ: ಇಂಗ್ಲೆಂಡ್ ಮಾಜಿ ಬೌಲರ್