ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡಕ್ಕೆ ತಗುಲಿದ ಕೋವಿಡ್ ಸೋಂಕು ಪ್ರಕರಣಗಳು ಡೆಲ್ಲಿ ಕ್ಯಾಪಿಟಲ್ಸ್ ಬಳಗವನ್ನು ತಲ್ಲಣಗೊಳಿಸಿತ್ತು. ಆದರೆ ಮುಖ್ಯ ಕೊಚ್ ರಿಕಿ ಪಾಂಟಿಂಗ್ ಅವರ ಅದ್ಭುತವಾದ ಮಾತುಗಳು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಸುಲಭ ಜಯ ಸಾಧಿಸಲು ನೆರವಾಯಿತು ಎಂದು ಆಲ್ರೌಂಡರ್ ಅಕ್ಷರ್ ಪಟೇಲ್ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಂಪ್ನಲ್ಲಿ ಕೋವಿಡ್ ಔಟ್ಬ್ರೇಕ್ ನಂತರ ಪುಣೆಯಲ್ಲಿ ನಡೆಯಬೇಕಿದ್ದ ಪಂದ್ಯ ಬ್ರೆಬೋರ್ನ್ ಸ್ಟೇಡಿಯಂಗೆ ಸ್ಥಳಾಂತರಗೊಂಡಿತ್ತು. ಪಂದ್ಯ ಆರಂಭಕ್ಕೆ ಕೆಲವೇ ಗಂಟೆಯಿದ್ದಾಗ ವಿಕೆಟ್ ಕೀಪರ್ ಟಿಮ್ ಸೀಫರ್ಟ್ಗೆ ಕೋವಿಡ್ ಪಾಸಿಟಿವ್ ದೃಡಪಟ್ಟಿತ್ತು. ಆದರೂ ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗೆ ಒಂಬತ್ತು ವಿಕೆಟ್‌ಗಳ ಸೋಲುಣಿಸುವ ಮೂಲಕ ಡೆಲ್ಲಿ ತಂಡ ತಮ್ಮ ಶಿಬಿರದಲ್ಲಿದ್ದ ಕೋವಿಡ್ ಬಿಕ್ಕಟ್ಟನ್ನು ನಿವಾರಿಸಿಕೊಂಡು ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು.
"ನಾವು ಕ್ವಾರಂಟೈನ್ನಲ್ಲಿದ್ದರಿಂದ ಮೂರುನಾಲ್ಕು ದಿನಗಳ ನಂತರ ಅಭ್ಯಾಸ ಆರಂಭಿಸಿದ್ದೆವು. ಆ ಸಂದರ್ಭದಲ್ಲಿ ಕೋಚ್ ಪಾಂಟಿಂಗ್ ನಮ್ಮ ಬಳಿ ಇರುವುದು ಎರಡೇ ಆಯ್ಕೆಗಳು. ನಾವು ಪಂದ್ಯವನ್ನಾಡಬೇಕು, ನೀವು ನಮ್ಮಲ್ಲಿ ಪಾಸಿಟಿವ್ ಪ್ರಕರಣಗಳಿವೆ, ಹೆಚ್ಚು ಅಭ್ಯಾಸ ಮಾಡಿಲ್ಲ ಎಂದು ಆಲೋಚಿಸಬೇಕು ಅಥವಾ ಹೊರಗಿನ ವಿಷಯಗಳು ನಮ್ಮ ಕೈಯಲ್ಲಿಲ್ಲ ಎಂದು ಭಾವಿಸಿ ಪ್ರಯತ್ನ ಮತ್ತು ಸಿದ್ಧತೆಗೆ ಸಂಬಂಧಿಸಿದಂತೆ ಬದ್ಧತೆ ತೋರಿಸಬೇಕು" ಎಂದು ತಿಳಿಸಿದರು. ನಂತರ ನಾವು ಪಂದ್ಯದ ಕಡೆಗೆ ಗಮನ ನೀಡಿದೆವು ಮತ್ತು ನಮ್ಮದೇ ಆದ ಯೋಜನೆಗಳನ್ನು ಮಾಡಿಕೊಂಡೆವು ಎಂದು ಅಕ್ಷರ್ ಪಟೇಲ್ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ನಂತರ ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ಅಕ್ಷರ್ 4 ಓವರ್ಗಳಲ್ಲಿ 10 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಪಂಜಾಬ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಡೆಲ್ಲಿ ತಂಡ ಎದುರಾಳಿಯನ್ನು ಕೇವಲ 115ರನ್ಗಳಿಗೆ ಆಲೌಟ್ ಮಾಡಿತು. ಈ ಮೊತ್ತವನ್ನು ಪೃಥ್ವಿ ಶಾ ಮತ್ತು ವಾರ್ನರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 10.3 ಓವರ್ಗಳಲ್ಲಿ ಚೇಸ್ ಮಾಡಿತು.
ಇದನ್ನೂ ಓದಿ:ಆ್ಯಡಂ ಮಿಲ್ನೆ ಬದಲಿಗೆ ಸಿಎಸ್ಕೆ ಸೇರಿದ 'ಜೂನಿಯರ್ ಮಾಲಿಂಗ'