ಅಹಮದಾಬಾದ್: ಇಲ್ಲಿ ನಡೆಯುತ್ತಿರುವ 4ನೇ ಮತ್ತು ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಭೋಜನ ವಿರಾಮಕ್ಕೂ ಮುನ್ನ 2 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ ಉಸ್ಮಾನ್ ಖವಾಜಾರ ಅರ್ಧಶತಕ ಮತ್ತು ನಾಯಕ ಸ್ಟೀವನ್ ಸ್ಮಿತ್ರ ಜಿಗುಟಾದ ಆಟದಿಂದ ರನ್ ಕಲೆ ಹಾಕುತ್ತಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.
ಟೆಸ್ಟ್ ಪಂದ್ಯವಾದರೂ ಆರಂಭದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಆರಂಭಿಕ ಟ್ರೇವಿಸ್ ಹೆಡ್ 44 ಎಸೆತಗಳಲ್ಲಿ 7 ಬೌಂಡರಿ ಸಮೇತ 32 ರನ್ ಮಾಡಿದ್ದರು. ಈ ವೇಳೆ ದಾಳಿ ನಡೆಸಿದ ಭಾರತದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಹೆಡ್ಗೆ ಪೆವಿಲಿಯನ್ ದಾರಿ ತೋರಿಸಿದರು. ಲಾಂಗ್ ಆಫ್ನತ್ತ ಬಲವಾದ ಹೊಡೆತಕ್ಕೆ ಕೈ ಹಾಕಿದ ಟ್ರೇವಿಸ್ ಹೆಡ್, ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿದರು. ಈ ಮೂಲಕ ಭಾರತ ವಿಕೆಟ್ ಖಾತೆ ಆರಂಭಿಸಿತು. ಇದರ ಬೆನ್ನಲ್ಲೇ ಆಸೀಸ್ ಬ್ಯಾಟಿಂಗ್ ಬೆನ್ನೆಲುಬಾಗಿರುವ ಮಾರ್ನಸ್ ಲಬುಶೇನ್ 3 ರನ್ ಗಳಿಸಿದ್ದಾಗ ಮೊಹಮದ್ ಶಮಿ ಎಸೆತದಲ್ಲಿ ಬೌಲ್ಡ್ ಆದರು.
ಇದರಿಂದ ಆಸೀಸ್ ಬೇಗನೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆದರೆ, ಇದಕ್ಕೆ ಅವಕಾಶ ಮಾಡಿಕೊಡದ ಉಸ್ಮಾನ್ ಖವಾಜಾ ಮತ್ತು ನಾಯಕ ಸ್ಟೀವನ್ ಸ್ಮಿತ್ ಉತ್ತಮ ಜೊತೆಯಾಟವಾಡುತ್ತಿದ್ದಾರೆ. ಉಸ್ಮಾನ್ ಖವಾಜಾ 22 ನೇ ಅರ್ಧಶತಕ ಪೂರೈಸಿದರು.
ನಡೆಯದ ಸ್ಪಿನ್ ಮೋಡಿ: ಕಳೆದ ಮೂರು ಪಂದ್ಯಗಳಲ್ಲಿ ಸ್ಪಿನ್ ಮೋಡಿ ಮಾಡಿದ್ದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕಮಾಲ್ ಕಾಣುತ್ತಿಲ್ಲ. 18 ಓವರ್ ಎಸೆದಿರುವ ಅಶ್ವಿನ್ 32 ರನ್ ನೀಡಿದ್ದು 1 ವಿಕೆಟ್ ಪಡೆದಿದ್ದಾರೆ. 10 ಓವರ್ಗಳಲ್ಲಿ ಜಡೇಜಾ 23 ರನ್ ನೀಡಿದ್ದು ವಿಕೆಟ್ ಸಿಕ್ಕಿಲ್ಲ.
ಪಂದ್ಯ ವೀಕ್ಷಿಸಿದ ಪ್ರಧಾನಿಗಳು: ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸೀಸ್ ಪಿಎಂ ಆಂಥೋನಿ ಅಲ್ಬನೀಸ್ ಅವರು ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು.
#BorderGavaskarTrophy2023 ರ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವಾದ ಇಂದು ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಆಟವನ್ನು ವೀಕ್ಷಿಸಿದರು. ಮೊಟೇರಾ ಕ್ರೀಡಾಂಗಣದಲ್ಲಿ ಮೀಸಲಿಟ್ಟಿದ್ದ ಆಸನಗಳಲ್ಲಿ ಪ್ರಧಾನಿಗಳು ಆಸೀನರಾಗಿ ಆಟಗಾರರನ್ನು ಹುರಿದುಂಬಿಸಿದರು.
ಆಸೀಸ್ ಪ್ರಧಾನಿ ಆಂಥೋನಿ ಅಲ್ಬನೀಸ್, ಮೋದಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು. ಇದಕ್ಕೂ ಮೊದಲು ಉಭಯ ಗಣ್ಯರು ಪಂದ್ಯಕ್ಕೆ ಚಾಲನೆ ನೀಡಿದ್ದಲ್ಲದೇ ಮೈದಾನಲ್ಲೆ ತೆರಳಿ ಆಟಗಾರರಿಗೆ ಕೈಕುಲುಕಿ ಶುಭ ಕೋರಿದ್ದರು. ರಾಷ್ಟ್ರಗೀತೆಯಲ್ಲಿಯೂ ಭಾಗಿಯಾಗಿದ್ದರು. ವಿಶೇಷ ವಾಹನದಲ್ಲಿ ತೆರಳಿ ಇಡೀ ಮೈದಾನವನ್ನು ರೌಂಡ್ ಹಾಕಿ ಅಭಿಮಾನಿಗಳತ್ತ ಕೈಬೀಸಿದ್ದರು.
ಓದಿ: 4ನೇ ಟೆಸ್ಟ್: ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್; ಭಾರತ-ಆಸೀಸ್ ಪ್ರಧಾನಿಗಳ 'ಕ್ರಿಕೆಟ್ ದೋಸ್ತಿ'