ಇಸ್ಲಾಮಾಬಾದ್(ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಬಂಧ ಹಳಸಿದ್ದು, ಐಸಿಸಿ ಟೂರ್ನಿಗಳು ಮತ್ತು ಏಷ್ಯಾ ಕಪ್ನಲ್ಲಿ ಮಾತ್ರ ಉಭಯ ತಂಡಗಳು ಎದುರಾಗುತ್ತಿವೆ. ಮುಂದಿನ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ಅಲ್ಲಿಗೆ ತೆರಳಲ್ಲ ಎಂದಿದೆ. ಇದಕ್ಕೆ ಕುದ್ದು ಹೋಗಿರುವ ಪಾಕಿಸ್ತಾನ 2023 ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸಲ್ಲ ಎಂದು ಹೇಳಿಕೆ ನೀಡಿದೆ.
ಇದೇ ವಿಷಯವಾಗಿ ಹೇಳಿಕೆ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್‌ನಿಂದ ಭಾರತ ಹೊರಗುಳಿಯಲು ನಿರ್ಧರಿಸಿದರೆ, ಅಲ್ಲಿ ನಡೆಯುವ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
2021 ರ ಟಿ 20 ವಿಶ್ವಕಪ್ ಮತ್ತು ಏಷ್ಯಾಕಪ್ನಲ್ಲಿ ಭಾರತದ ವಿರುದ್ಧದ ಗೆಲುವನ್ನು ಉಲ್ಲೇಖಿಸಿರುವ ರಮೀಜ್ ರಾಜಾ, ಕೋಟ್ಯಧಿಪತಿ ಸಂಸ್ಥೆಯ ನೇತೃತ್ವದ ತಂಡವನ್ನು ಪಾಕಿಸ್ತಾನ ಸೋಲಿಸಿದೆ. ಇನ್ನು ಮುಂದಿನ ಪಂದ್ಯಗಳಲ್ಲಿ ಇದನ್ನೇ ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಆಡಲು ಬರದಿದ್ದರೆ, ನಾವು ಕೂಡ ಆ ದೇಶದಲ್ಲಿ ನಡೆಯುವ ವಿಶ್ವಕಪ್ನಲ್ಲಿ ಭಾಗವಹಿಸುವುದಿಲ್ಲ. ಭಾರತ ಮೊಂಡು ವಾದ ಮಾಡಿದರೆ, ನಾವೂ ಅದನ್ನೇ ಪಾಲಿಸುತ್ತೇವೆ. ಪಾಕಿಸ್ತಾನ ತಂಡ ಇಲ್ಲದೇ ವಿಶ್ವಕಪ್ ಆಡಿಸಲಿ ನೋಡೋಣ ಎಂದು ಬೆದರಿಸುವ ಮಾದರಿಯಲ್ಲಿ ಮಾತು ಹರಿಬಿಟ್ಟಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆರ್ಥಿಕತೆಯನ್ನು ಹೆಚ್ಚಿಸಬೇಕಿದೆ. ಎಲ್ಲ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿದಾಗ ಮಾತ್ರ ಇದು ಸಾಧ್ಯವಾಗಲಿದೆ. ಅದನ್ನು ತಂಡ ಈ ಬಾರಿಯ ವಿಶ್ವಕಪ್ನಲ್ಲಿ ಮಾಡಿ ತೋರಿಸಿದೆ. ವಿಶ್ವದ ಅತಿ ಶ್ರೀಮಂತ ಮಂಡಳಿಯ ತಂಡವನ್ನು ವರ್ಷದಲ್ಲಿ ಎರಡು ಬಾರಿ ಸೋಲಿಸಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಈ ಹಿಂದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಬಾರಿಯ ಏಷ್ಯಾಕಪ್ ತಟಸ್ಥ ಸ್ಥಳದಲ್ಲಿ ನಡೆಸಬೇಕು. ಪಾಕಿಸ್ತಾನ ಆಯೋಜಿಸಿದಲ್ಲಿ ಭದ್ರತಾ ಕಾರಣಗಳಿಗಾಗಿ ಭಾರತ ಅಲ್ಲಿಗೆ ಪಯಣಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಓದಿ: ನಾಳೆ 2ನೇ ಏಕದಿನ ಪಂದ್ಯ: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ