ಕಿಂಗ್ಸ್ಟನ್(ಜಮೈಕಾ): ಪಾಕಿಸ್ತಾನ ಮುಖ್ಯಕೋಚ್ ಮಿಸ್ಬಾ ಉಲ್ ಹಕ್ಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿಟಿದೆ. ಸರಣಿ ಮುಗಿಸಿರುವ ತಂಡ ಪಾಕಿಸ್ತಾನ ಮರಳಿದರೆ, ಮಿಸ್ಬಾ ಮಾತ್ರ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದು ನೆಗೆಟಿವ್ ಪಡೆದ ನಂತರ ತಮ್ಮ ದೇಶಕ್ಕೆ ಪ್ರಯಾಣ ಬೆಳಸಲಿದ್ದಾರೆ.
ಮಿಸ್ಬಾ ಲಕ್ಷಣರಹಿತರಾಗಿದ್ದಾರೆ, ಅವರು ಇಂದಿನಿಂದ 10 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದು, ನಂತರ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.
ವಿಂಡೀಸ್ ಪ್ರವಾಸದಲ್ಲಿದ್ದ ಪಾಕಿಸ್ತಾನದ ಸಂಪೂರ್ಣ ತಂಡದಲ್ಲಿ ಮಿಸ್ಬಾ ಮಾತ್ರ ಎರಡೂ ಪಿಸಿಆರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಉಳಿದೆಲ್ಲ ಸದಸ್ಯರು ನೆಗೆಟಿವ್ ಪಡೆದಿದ್ದು, ವೇಳಾಪಟ್ಟಿಯಂತೆ ಬುಧವಾರ ಎಲ್ಲರೂ ಜೆಮೈಕಾದಿಂದ ಪಾಕಿಸ್ತಾನದ ವಿಮಾನ ಏರಲಿದ್ದಾರೆ.
ಪಿಸಿಬಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ, ಮಿಸ್ಬಾ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳಲು ವೈದ್ಯಕೀಯ ತಜ್ಞರನ್ನು ನೇಮಕ ಮಾಡಿದೆ. ಮಿಸ್ಬಾ ಅವರನ್ನು 10 ದಿನಗಳ ಕ್ವಾರಂಟೈನ್ಗಾಗಿ ಬೇರೆ ಹೋಟೆಲ್‌ಗೆ ವರ್ಗಾಯಿಸಲಾಗುವುದು ಎಂದು ಮಂಡಳಿ ಹೇಳಿಕೆಯಲ್ಲಿ ಸೇರಿಸಿದೆ.
ಪಾಕಿಸ್ತಾನ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯವನ್ನು ವಿಂಡೀಸ್ ಗೆದ್ದರೆ, 2ನೇ ಟೆಸ್ಟ್ ಪಾಕಿಸ್ತಾನ ಪಾಲಾಗಿತ್ತು. ಇನ್ನು 4 ಪಂದ್ಯಗಳ ಟಿ-20 ಸರಣಿಯನ್ನು ಪಾಕಿಸ್ತಾನ 1-0ಯಲ್ಲಿ ವಶಪಡಿಸಿಕೊಂಡಿತ್ತು. 3 ಪಂದ್ಯಗಳು ಮಳೆಗೆ ಆಹುತಿಯಾಗಿದ್ದವು.
ಇದನ್ನು ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿ : ಅಗ್ರ 2ರಲ್ಲಿ ಭಾರತ-ಪಾಕಿಸ್ತಾನ