ಕರಾಚಿ: ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಭರ್ಜರಿ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಎರಡು ದಿನಗಳ ಕಾಲ ಯಶಸ್ವಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಆಸೀಸ್ ವಿರುದ್ಧ ಸೋಲಿನತ್ತ ಸಾಗಿದ್ದ 2ನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ನೀಡಿದ್ದ 506 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 171.4 ಓವರ್ಗಳನ್ನು ಯಶಸ್ವಿಯಾಗಿ ಎದುರಿಸಿ ಸೋಲುವ ಪಂದ್ಯವನ್ನು ಡ್ರಾ ಸಾಧಿಸಿಕೊಂಡಿದೆ. ಕೇವಲ 21ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಪಾಕ್ ತಂಡಕ್ಕೆ ನಾಯಕ ಬಾಬರ್ ಅಜಮ್ ಮತ್ತು ಅಬ್ದುಲ್ ಶಫೀಕ್ 3ನೇ ವಿಕೆಟ್ಗೆ 228 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಕೊನೆಯ ದಿನದವರೆಗೆ ಬ್ಯಾಟಿಂಗ್ ಮಾಡಿದ ಶಫೀಕ್ 305 ಎಸೆತಗಳಲ್ಲಿ 96 ರನ್ಗಳಿಸಿ ನಿರ್ಗಮಿಸಿದರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಫವಾದ್ ಆಲಮ್(9) ವಿಕೆಟ್ ಕಳೆದುಕೊಂಡ ನಂತರ ಮತ್ತೆ ಹಿನ್ನಡೆ ಅನುಭವಿಸಿತ್ತು.
ಆದರೆ 5ನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಬಾಬರ್ ಮತ್ತು ಉಪನಾಯಕ ರಿಜ್ವಾನ್ 115 ರನ್ ಸೇರಿಸಿ ಆಸೀಸ್ ಗೆಲುವಿನ ಕನಸಿಗೆ ಎಳ್ಳು ನೀರು ಬಿಟ್ಟರು. ಅಂತಿಮ ದಿನದಂತ್ಯಕ್ಕೆ ಕೆಲವೇ ಓವರ್ ಇರುವಾಗ 425 ಎಸೆತಗಳಲ್ಲಿ 21 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 196 ರನ್ಗಳಿಸಿದ್ದ ಬಾಬರ್ ಅಜಮ್ ಔಟಾದರು. ಇದರ ಬೆನ್ನಲ್ಲೇ ಫಹೀಮ್ ಅರಾಫತ್ ಮತ್ತು ಸಾಜಿದ್ ಖಾನ್ ಔಟಾದರಾದರೂ ರಿಜ್ವಾನ್ ಅಜೇಯ ಶತಕ ಸಿಡಿಸಿ ಪಂದ್ಯ ಡ್ರಾನಲ್ಲಿ ಅಂತ್ಯವಾಗುವಂತೆ ಮಾಡಿದರು. ರಿಜ್ವಾನ್ 177 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೆಯ 104 ರನ್ಗಳಿಸಿದರು.
ನೇಥನ್ ಲಿಯಾನ್ 112ಕ್ಕೆ 4, ಪ್ಯಾಟ್ ಕಮಿನ್ಸ್ 75ಕ್ಕೆ 2 ಮತ್ತು ಗ್ರೀನ್ 32ಕ್ಕೆ1 ವಿಕೆಟ್ ಪಡೆದರಾದೂ ಎರಡು ದಿನಗಳ ಅವಧಿಯಲ್ಲಿ ಪಾಕಿಸ್ತಾನವನ್ನು ಆಲೌಟ್ ಮಾಡುವಲ್ಲಿ ವಿಫಲರಾದರು.
ಗೆಲುವಿನ ಅವಕಾಶವನ್ನು ಕೈಚೆಲ್ಲಿದ ಕಮಿನ್ಸ್ ಮತ್ತು ಮ್ಯಾನೇಜ್ಮೆಂಟ್: ಮೊದಲ ಎರಡು ದಿನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಉಸ್ಮಾನ್ ಖವಾಜ ಅವರ 160 ರನ್ಗಳ ನೆರವಿನಿಂದ 556 ರನ್ಗಳಿಸಿತ್ತು. ನಂತರ ಪಾಕಿಸ್ತಾನವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 148 ರನ್ಗಳಿಗೆ ಆಲೌಟ್ ಮಾಡಿತಾದರೂ ಫಾಲೋ ಆನ್ ಹೇರದೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಅವರ ಈ ಒಂದು ಕೆಟ್ಟ ನಿರ್ಧಾರದಿಂದ 24 ವರ್ಷಗಳ ನಂತರ ಪಾಕ್ ನೆಲದಲ್ಲಿ ಟೆಸ್ಟ್ ಗೆಲ್ಲುವ ಅವಕಾಶವನ್ನು ಕೈಯ್ಯಾರೆ ಹಾಳು ಮಾಡಿಕೊಂಡಿತು.
ಇದನ್ನೂ ಓದಿ:ರೋಹಿತ್ ಶರ್ಮಾ ಕೊಹ್ಲಿಗಿಂತಲೂ ಉತ್ತಮ ನಾಯಕನಾಗಬಹುದು: ಮಾಜಿ ಕ್ರಿಕೆಟಿಗರಿಂದ ಶ್ಲಾಘನೆ