ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮತ್ತೆ ಕೊರೊನಾ ವಕ್ಕರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಫಿಜಿಯೋ ನಂತರ ವಿದೇಶಿ ಆಟಗಾರನೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಪುಣೆಗೆ ಆಗಮಿಸುವ ಬದಲು ಆಟಗಾರರೆಲ್ಲರೂ ಮುಂಬೈನಲ್ಲೇ ಕ್ವಾರಂಟೈನ್ ಆಗಿದ್ದಾರೆಂದು ತಿಳಿದು ಬಂದಿದೆ.
ಏಪ್ರಿಲ್ 20ರಂದು ಡೆಲ್ಲಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಬೇಕಿತ್ತು. ಆದರೆ, ತಂಡದಲ್ಲಿರುವ ವಿದೇಶಿ ಆಟಗಾರನಿಗೆ ಸೋಂಕು ತಗುಲಿರುವುದುರಿಂದ ಇಡೀ ತಂಡ ಕ್ವಾರಂಟೈನ್ ಆಗಿದೆ. ಪಿಟಿಐ ಏಜೆನ್ಸಿಯ ಪ್ರಕಾರ ತಂಡದಲ್ಲಿರುವ ಆಸ್ಟ್ರೇಲಿಯಾದ ಆಲ್ರೌಂಡರ್ರಲ್ಲಿ ಕೆಲವು ಕೋವಿಡ್ ಲಕ್ಷಣಗಳು ಕಂಡು ಬಂದಿದ್ದು, ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ನಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ವರದಿಯಾಗಿದೆ.
2022ರ ಆವೃತ್ತಿಯಲ್ಲಿ ಡೆಲ್ಲಿ ತಂಡದಲ್ಲಿರುವ ಏಕೈಕ ಆಸೀಸ್ ಆಲ್ರೌಂಡರ್ ಎಂದರೆ ಮಿಚೆಲ್ ಮಾರ್ಷ್ ಮಾತ್ರ. ಮಾರ್ಷ್ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ಬಂದು ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಇವರು ಈಗಾಗಲೇ ಕೋವಿಡ್ 19ಗೆ ತುತ್ತಾಗಿರುವ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ತ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಡೆಲ್ಲಿ ತಂಡ ಇಂದು ಪುಣೆಗೆ ಪ್ರಯಾಣಿಸಬೇಕಿತ್ತು. ಆದರೆ, ಇಡೀ ತಂಡದಲ್ಲಿರುವ ಆಟಗಾರರಿಗೆ ತಮ್ಮ ರೂಮ್ನಲ್ಲಿ ಉಳಿದುಕೊಳ್ಳುವಂತೆ ತಿಳಿಸಲಾಗಿದೆ. ಇನ್ನು ಕೋವಿಡ್ 19 ಸೋಂಕು ಏಕಾಏಕಿ ಬಂದಿದಿಯೇ ಅಥವಾ ಪ್ಯಾಟ್ರಿಕ್ ಫರ್ಹಾರ್ತ್ ನಂತಹ ಪ್ರತ್ಯೇಕ ಪ್ರಕರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಪ್ರಕಾರ ಆರ್‌ಟಿಪಿಸಿಆರ್ ಮಾಡಲಾಗುತ್ತಿದೆ. ಹಾಗಾಗಿ, ಇಂದಿನ ಪುಣೆ ಪ್ರಯಾಣವನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ಮೂಲ ಪಿಟಿಐಗೆ ತಿಳಿಸಿದೆ.
ಇದನ್ನೂ ಓದಿ:ಮಿಲ್ಲರ್ ಅದ್ಭುತ ಬ್ಯಾಟಿಂಗ್ : CSK ವಿರುದ್ಧ ಗುಜರಾತ್ ಟೈಟನ್ಸ್ ಗೆ 3 ವಿಕೆಟ್ ರೋಚಕ ಜಯ