ನವದೆಹಲಿ: 14 ವರ್ಷಗಳ ಹಿಂದೆ ಇದೇ ದಿನದಂದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವು ಚೊಚ್ಚಲ ಟಿ-20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬೌಲ್ ಔಟ್ ಮೂಲಕ ಸೋಲಿಸಿತ್ತು.
ಟಿ- 20 ವಿಶ್ವಕಪ್ ಪಂದ್ಯವು ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆಯಿತು.
ಉಭಯ ತಂಡಗಳ ನಡುವಿನ ಪಂದ್ಯವು ಟೈ ಆಗಿ ಕೊನೆಗೊಂಡಿತ್ತು. ಹೀಗಾಗಿ ಬಾಲೌಟ್ ಆಟಕ್ಕೆ ಮೊರೆಹೋಗಲಾಗಿತ್ತು. ಈ ರೋಚಕ ಬಾಲೌಟ್ ಹಣಾಹಣಿಯಲ್ಲಿ ಭಾರತದ ಪರವಾಗಿ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ರಾಬಿನ್ ಉತ್ತಪ್ಪ ಸ್ಟಂಪ್‌ಗಳ ಮೂಲಕ 3 ವಿಕೆಟ್ಗಳನ್ನು ಹೊಡೆದುರುಳಿಸಿದ್ದರು. ಆದರೆ, ಪಾಕಿಸ್ತಾನದ ಪರವಾಗಿ ಶಾಹಿದ್ ಅಫ್ರಿದಿ, ಉಮರ್ ಗುಲ್, ಯಾಸಿರ್ ಅರಾಫತ್ ವಿಕೆಟ್ ಉರುಳಿಸಲು ವಿಫಲರಾಗಿ ಅಂತಿಮವಾಗಿ ಸೋಲೊಪ್ಪಿಕೊಂಡರು.
ಎಂಎಸ್ ಧೋನಿ ನೇತೃತ್ವದ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿತ್ತು. ನಿಗದಿತ ಇಪ್ಪತ್ತು ಓವರ್‌ಗಳಲ್ಲಿ ಒಟ್ಟು 141/9 ರನ್ ಗಳಿಸಿ ಪಾಕ್ಗೆ 142 ರನ್ಗಳ ಸವಾಲನ್ನೊಡ್ಡಿತ್ತು. ರಾಬಿನ್ ಉತ್ತಪ್ಪ ಮತ್ತು ಎಂಎಸ್ ಧೋನಿ ಕ್ರಮವಾಗಿ 50 ಮತ್ತು 33 ರನ್ ಗಳಿಸಿದ್ದರು. ಪಾಕಿಸ್ತಾನದ ಪರವಾಗಿ ಮೊಹಮ್ಮದ್ ಆಸಿಫ್ ನಾಲ್ಕು ವಿಕೆಟ್ ಪಡೆದಿದ್ದರು.
ಭಾರತ ನೀಡಿ ಗುರಿ ಬೆನ್ನತ್ತಿದ ಪಾಕಿಸ್ತಾನವು ಅದಾಗಲೇ 87 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಪಾಕ್ ಪರವಾಗಿ ಮಿಸ್ಬಾ ಉಲ್ ಹಕ್ 53 ರನ್ ಗಳಿಸಿದ್ದು, ಅಂತಿಮ ಓವರ್‌ನಲ್ಲಿ ರನೌಟ್ ಆದರು. ಹೀಗಾಗಿ ಪಂದ್ಯವು ಟೈನಲ್ಲಿ ಕೊನೆಗೊಂಡಿತು. ಭಾರತದ ಪರವಾಗಿ ಇರ್ಫಾನ್ ಪಠಾಣ್ ಎರಡು ವಿಕೆಟ್ ಪಡೆದರು. ಇನ್ನು ಎಂಎಸ್ ಧೋನಿ ಭಾರತವನ್ನು ಮುನ್ನಡೆಸಿ ಇದೇ ಮೊದಲ ಬಾರಿಗೆ ಟಿ 20 ವಿಶ್ವಕಪ್ ಎತ್ತಿಹಿಡಿದಿದ್ದರು.