ಆಕ್ಲೆಂಡ್: ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿ ಕೈವಶ ಮಾಡಿಕೊಂಡಿರುವ ಭಾರತ ಇಂದು ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯವಾಡುತ್ತಿದೆ. ಶಿಖರ್ ಧವನ್ ಬಳಗದ ವಿರುದ್ಧ ಟಾಸ್ ಗೆದ್ದಿರುವ ಕಿವೀಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು.
ಶಿಖರ್ ಧವನ್ ಜೊತೆಗೆ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ದೀಪಕ್ ಹೂಡಾ ಅವರನ್ನು ಕೈಬಿಡಲಾಗಿದೆ. ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕಿದೆ. ಆಲ್ ರೌಂಡರ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶಹಬಾಜ್ ಅಹ್ಮದ್ ಹೊರಬಿದ್ದಿದ್ದಾರೆ.
ಬೌಲಿಂಗ್ ಲೈನ್‌ಅಪ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಹಾಗು ಉಮ್ರಾನ್ ಮಲಿಕ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20I ಸರಣಿಯಲ್ಲಿ ಉಮ್ರಾನ್ ಅವಕಾಶ ಪಡೆದಿರಲಿಲ್ಲ.
ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 217 ರನ್ ಆಗಿದೆ. ಆದರೆ, ಕಳೆದ ಎಂಟು ಏಕದಿನ ಪಂದ್ಯಗಳಲ್ಲಿ ಇದು 262 ರನ್ಗಳಿಗೇರಿದೆ. ನ್ಯೂಜಿಲೆಂಡ್ ಈ ಮೈದಾನದಲ್ಲಿ ಆಡಿದ ಕೊನೆಯ ಏಳು ಪಂದ್ಯಗಳ ಪೈಕಿ ಆರನ್ನು ಗೆದ್ದಿದೆ. ಟಿ20ಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ ಮೇಲೆ ನ್ಯೂಜಿಲೆಂಡ್ ತಂಡ ಕಣ್ಣಿಟ್ಟಿದೆ.
ಭಾರತ ತಂಡ: ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ರಿಷಭ್ ಪಂತ್(ವಿ.ಕೀ), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯ), ಟಾಮ್ ಲ್ಯಾಥಮ್ (ವಿ.ಕೀ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗ್ಯುಸನ್.
ಇದನ್ನೂ ಓದಿ: ಅನುಚಿತ ವರ್ತನೆ: ಕ್ರಿಸ್ಟಿಯಾನೊ ರೊನಾಲ್ಡೊಗೆ 50 ಲಕ್ಷ ದಂಡ, 2 ಪಂದ್ಯ ನಿಷೇಧ