ಮುಂಬೈ: ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಾವೂ 45 ವರ್ಷದ ವರೆಗೆ ಐಪಿಎಲ್ನಲ್ಲಿ ಆಡುವುದಾಗಿ ಮತ್ತು ಈ ವರ್ಷ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಡುವುದಕ್ಕೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಸೋಮವಾರ 195ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ತಂಡ ಸೋಲುಕಂಡಿತು. ರಾಹುಲ್ರ ನಿಧಾನಗತಿ ಬ್ಯಾಟಿಂಗ್ ಮತ್ತು ಬೌಲರ್ಗಳ ಕಳಪೆ ಪ್ರದರ್ಶನದಿಂದ ತಂಡ 6 ವಿಕೆಟ್ಗಳಿಂದ ಸೋಲು ಕಂಡಿತ್ತು.
ಈ ಪಂದ್ಯದ ನಂತರ ಖಾಸಗಿ ಮಾಧ್ಯಮದ ಜೊತೆ ಮಾತನಾಡುವ ವೇಳೆ ನಿವೃತ್ತಿ ಯೋಚನೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕ್ರಿಸ್ಗೇಲ್ , " ನನ್ನಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಉಳಿದಿದೆ. ನನಗೀಗ 42 ವರ್ಷ, ಇನ್ನು ಮೂರು ವರ್ಷಗಳ ಕಾಲ ಐಪಿಎಲ್ನಲ್ಲಿ ಆಡಲಿದ್ದೇನೆ" ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಂಜಾಬ್ ಕಿಂಗ್ಸ್ ತಂಡ ಬಲಿಷ್ಠವಾಗಿದ್ದು, 2021ರ ಐಪಿಎಲ್ನಲ್ಲಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
4 ವರ್ಷಗಳ ಕಾಲ ಈ ಫ್ರಾಂಚೈಸಿಯಲ್ಲಿ ಕಳೆದಿರುವುದು ಅದ್ಭುತವಾಗಿತ್ತು. ಆದರೆ, ದುರದೃಷ್ಟಕರವೆಂದರೆ ಪ್ಲೇಆಫ್‌ಗೆ ಪ್ರವೇಶಿಸುವಲ್ಲಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಳ್ಳುತ್ತಿದ್ದೇವೆ. ಎರಡು ಬಾರಿ ಅವಕಾಶವನ್ನು ಕಳೆದುಕೊಂಡೆವು. ಇದೀಗ ಉತ್ತಮ ಘಟಕವನ್ನು ಹೊಂದಿದ್ದೇವೆ, ಇದರ ಕ್ರೆಡಿಟ್ ಫ್ರಾಂಚೈಸಿ ಮಾಲೀಕರಿಗೆ ಸಲ್ಲಬೇಕು. ನಾನು ಪಂಜಾಬ್ ತಂಡದಲ್ಲಿ ಆಡುವುದಕ್ಕೆ ಕೃತಜ್ಞನಾಗಿದ್ದೇನೆ. ಹಾಗೂ ಈ ವರ್ಷ ಐಪಿಎಲ್ ಗೆಲ್ಲಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮದೇ ದೇಶದ ನಿಕೋಲಸ್ ಪೂರನ್ ಮತ್ತು ಶಾರುಕ್ ಖಾನ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದು, ಇವರಿಬ್ಬರು ಪಂಜಾಬ್ ಕಿಂಗ್ಸ್ನ ಎಕ್ಸ್-ಫ್ಯಾಕ್ಟರ್ ಎಂದಿದ್ದಾರೆ.
ಇದನ್ನು ಓದಿ:ಆರ್ಸಿಬಿ ಆಪತ್ಬಾಂಧವನ ಹೆಸರಲ್ಲಿದೆ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ