ಡಬ್ಲಿನ್: ಅಜೇಯ ಶತಕ(127, 82 ಎಸೆತ) ಸಿಡಿಸಿದ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಅವರ ಕೊನೆಯ ಓವರ್ನಲ್ಲಿನ ಮಿಂಚಿನ ಬ್ಯಾಟಿಂಗ್ನಿಂದ ನ್ಯೂಜಿಲೆಂಡ್ ತಂಡವು ಐರ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 1 ವಿಕೆಟ್ ಅಂತರದ ರೋಚಕ ಜಯ ದಾಖಲಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
301 ರನ್ಗಳ ಗುರಿ ಬೆನ್ನಟ್ಟಿದ ಕಿವೀಸ್ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಅರ್ಧಶತಕದ(51) ಹೊರತಾಗಿಯೂ 120 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು. ಫಿನ್ ಅಲೆನ್ 6, ವಿಲ್ ಯಂಗ್ 1, ನಾಯಕ ಟಾಮ್ ಲ್ಯಾಥಮ್ 23 ಹಾಗೂ ಹೆನ್ರಿ ನಿಕೋಲಸ್ 7 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಆದರೆ ಈ ವೇಳೆ ಕ್ರೀಸ್ಗೆ ಬಂದ ಮೈಕೆಲ್ ಬ್ರೇಸ್‌ವೆಲ್ ಪಂದ್ಯದ ಗತಿಯನ್ನೇ ಬದಲಿಸಿದರು.
ಭರ್ಜರಿ ಶತಕ ಚಚ್ಚಿದ ಬ್ರೇಸ್ವೆಲ್ಗೆ ಗ್ಲೆನ್ ಫಿಲಿಪ್ಸ್ 38 ಹಾಗೂ ಈಸ್ ಸೋಧಿ 25 ರನ್ ಮೂಲಕ ಉತ್ತಮ ಸಾಥ್ ನೀಡಿದರು. ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ಅಬ್ಬರ ಮುಂದುವರೆಸಿದ ಬ್ರೇಸ್‌ವೆಲ್ 10 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ ಕೊನೆಯ ಓವರ್ನ 5ನೇ ಎಸೆತದಲ್ಲಿ ಕಿವೀಸ್ಗೆ ಗೆಲುವು ತಂದಿತ್ತರು.
ಅಂತಿಮ ಓವರ್ನಲ್ಲಿ 20 ರನ್: ಪಂದ್ಯದ 50ನೇ ಓವರ್ನಲ್ಲಿ ನ್ಯೂಜಿಲೆಂಡ್ಗೆ 20 ರನ್ ಅಗತ್ಯವಿತ್ತು. ಕ್ರೇಗ್ ಯಂಗ್ ಎಸೆದ ಈ ಓವರ್ನಲ್ಲಿ 4,4,6,4,6 ಬಾರಿಸುವ ಮೂಲಕ ಬ್ರೇಸ್‌ವೆಲ್ ನೆರೆದಿದ್ದ ಐರ್ಲೆಂಡ್ ಪ್ರೇಕ್ಷಕರಿಗೆ ಶಾಕ್ ನೀಡಿದರು. ಇನ್ನೂ ಒಂದು ಎಸೆತ ಇರುವಾಗಲೇ ಕಿವೀಸ್ 1 ವಿಕೆಟ್ ಅಂತರದ ಗೆಲುವಿನ ಕೇಕೆ ಹಾಕಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಟ್ ಹ್ಯಾರಿ ಟೆಕ್ಟರ್ ಚೊಚ್ಚಲ ಶತಕ (113) ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ಗೆ ಬರೋಬ್ಬರಿ 300 ರನ್ ಪೇರಿಸಿತ್ತು. ಇನ್ನುಳಿದಂತೆ ಕರ್ಟಿಸ್ ಕ್ಯಾಂಫರ್ 42, ಆ್ಯಂಡಿ ಮ್ಯಾಕಬ್ರಿನ್ 39 ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಟಕ್ಕರ್ 26 ರನ್ ಕಾಣಿಕೆ ನೀಡಿದ್ದರು. ಮೂರು ಪಂದ್ಯಗಳ ಸರಣಿಯ 2ನೇ ಪಂದ್ಯ ಡಬ್ಲಿನ್ನಲ್ಲೇ ಜುಲೈ 12ರಂದು ನಡೆಯಲಿದೆ.
ಇದನ್ನೂ ಓದಿ: ವಿರಾಟ್ ಮತ್ತೆ ವಿಫಲ: ಮಾಜಿ ನಾಯಕನ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ರೋಹಿತ್ ಹೀಗಂದ್ರು..