ಮುಂಬೈ (ಮಹಾರಾಷ್ಟ್ರ): ಕೋಲ್ಕತ್ತಾದಲ್ಲಿ ವಿಶ್ವಕಪ್ ಪಂದ್ಯಗಳ ಟಿಕೆಟ್ ಅಕ್ರಮ ಮಾರಾಟ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಹೈವೋಲ್ಟೇಜ್ ಸೆಮೀಸ್ ಪಂದ್ಯದ ಟಿಕೆಟ್ ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ವಿಶ್ವಕಪ್ನ ಮುಂದಿನ ಮೂರು ಪಂದ್ಯಗಳ ಟಿಕೆಟ್ಗಳು ಮಾರಾಟವಾಗಿದೆ.
ಮುಂಬೈ ಪೊಲೀಸ್ ಡಿಸಿಪಿ ಪ್ರವೀಣ್ ಮುಂಡೆ ವಿಶ್ವಕಪ್ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ಬಗ್ಗೆ ಮಾತನಾಡಿದ್ದಾರೆ. ’‘ನವೆಂಬರ್ 2 ರಂದು ಭಾರತ ಮತ್ತು ಶ್ರೀಲಂಕಾ ಪಂದ್ಯದ ವೇಳೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕೆಲವು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ ‘‘ಎಂದು ಹೇಳಿದರು.
"ನಾವು ಈಗಾಗಲೇ ಕೆಲವು ವ್ಯಕ್ತಿಗಳನ್ನು ಬ್ಲಾಕ್ ಮಾರ್ಕೆಟಿಂಗ್ ಆರೋಪದ ಮೇಲೆ ಬಂಧಿಸಿದ್ದೇವೆ. ಭಾರತ ಮತ್ತು ಶ್ರೀಲಂಕಾ ಪಂದ್ಯದ ಸಂದರ್ಭದಲ್ಲಿ, ನಾವು ಕ್ರೀಡಾಂಗಣದ ಹೊರಗೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಿದ ಕೆಲವು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೇವೆ. ಅಭಿಮಾನಿಗಳು ಹೆಚ್ಚು ಜಾಗರೂಕರಾಗಿರಲು ನಾನು ಕೇಳುತ್ತೇನೆ. ಟಿಕೆಟ್‌ಗಳನ್ನು ಖರೀದಿಸಲು ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ ಮತ್ತು ಟಿಕೆಟ್‌ನಲ್ಲಿ ಬರೆದಿರುವ ಮೊತ್ತವನ್ನು ಮಾತ್ರ ಪಾವತಿಸಿ" ಪ್ರವೀಣ್ ವಿನಂತಿಸಿದ್ದಾರೆ.
ಸಾಮಾನ್ಯ ಪಂದ್ಯಗಳನ್ನು ನೋಡಲು ಜನ ಸ್ಟೇಡಿಯಂಗೆ ಮುಗಿ ಬೀಳುತ್ತಾರೆ. ಅದರಲ್ಲೂ ಈಗ ವಿಶ್ವಕಪ್ನ ಪ್ರಮುಖ ಹಂತ ಸೆಮೀಸ್ಗೆ ಪ್ರೇಕ್ಷಕರು ಇನ್ನಷ್ಟೂ ಬರುವ ನಿರೀಕ್ಷೆ ಇದೆ. ಇಂತಹ ಸಂದರ್ಭದಲ್ಲಿ ಬೇಡಿಕೆಯನ್ನು ಬಳಸಿಕೊಂಡು ಬ್ಲಾಕ್ ಟಿಕೆಟ್ ದಂಧೆಗಳನ್ನು ಮಾಡಲಾಗುತ್ತದೆ. ಸಾವಿರ ಮೌಲ್ಯದ ಟಿಕೆಟ್ನ್ನು ಲಕ್ಷ ಗಟ್ಟಲೆ ಹಣಕ್ಕೆ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ. ಭಾರತ - ಶ್ರೀಲಂಕಾ ಪಂದ್ಯದ ವೇಳೆ ಒಂದೇ ಟಿಕೆಟ್ ಅನ್ನು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಪಂದ್ಯವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ, ಭದ್ರತಾ ಪ್ರೋಟೋಕಾಲ್‌ಗಳ ಕಾರಣ ಅಭಿಮಾನಿಗಳು ಮುಂಚಿತವಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಬೇಕೆಂದು ನಾನು ವಿನಂತಿಸುತ್ತೇನೆ. ಬೆಳಗ್ಗೆ 11:30ಕ್ಕೆ ಕ್ರೀಡಾಂಗಣವನ್ನು ತೆರೆಯುತ್ತೇವೆ. ಬ್ಯಾಗ್‌ಗಳು, ತಂಬಾಕು ಉತ್ಪನ್ನಗಳು, ನಾಣ್ಯಗಳು, ಕಾಗದ, ಪೆನ್ಸಿಲ್‌ಗಳು, ಪೆನ್‌ಗಳು, ಪವರ್ ಬ್ಯಾಂಕ್‌ಗಳು, ನೀರಿನ ಬಾಟಲಿಗಳು ಮತ್ತು ಆಕ್ಷೇಪಾರ್ಹ ಬ್ಯಾನರ್‌ಗಳು ಕ್ರೀಡಾಂಗಣದ ಒಳಗೆ ನಿಷೇಧಿಸಲಾಗಿದೆ. ಮೊಬೈಲ್ ಫೋನ್, ಕೈಗಡಿಯಾರ ಮತ್ತು ವ್ಯಾಲೆಟ್‌ಗಳನ್ನು ಮಾತ್ರ ಕ್ರೀಡಾಂಗಣದೊಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ಹಣಾಹಣಿಗೆ ರಾಡ್ ಟಕರ್; ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಪಂದ್ಯಕ್ಕೆ ಮೆನನ್ ಫೀಲ್ಡ್ ಅಂಪೈರ್