ಮುಂಬೈ: 2022ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ಮಂಗಳವಾರ ಬಹಿರಂಗಗೊಳಿಸಿವೆ. ಇದರಲ್ಲಿ ಕೆಲವೊಂದು ಆಶ್ಚರ್ಯಕರ ರಿಟೈನ್ ಕಂಡು ಬಂದರೆ, ಇನ್ನೂ ಕೆಲವು ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಬಾರಿ ರೋಹಿತ್, ಹಾರ್ದಿಕ್ ಮತ್ತು ಬುಮ್ರಾ ಅವರನ್ನು ಖರೀದಿಸಿತ್ತು. ಆದರೆ, ಈ ಬಾರಿ ಹಾರ್ದಿಕ್ರನ್ನು ಬಿಟ್ಟುಕೊಟ್ಟಿದೆ. ಈ ನಿರ್ಧಾರ ನಿಜಕ್ಕೂ ಕ್ರಿಕೆಟ್ ತಜ್ಞರಿಗೆ ಅಚ್ಚರಿ ಮೂಡಿಸಿತ್ತು. ಆದರೆ, ನ್ಯೂಜಿಲ್ಯಾಂಡ್ ಮಾಜಿ ನಾಯಕ ಮತ್ತು ಐಪಿಎಲ್ನಲ್ಲಿ ದಶಕಗಳ ಕಾಲ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಡೇನಿಯಲ್ ವೆಟೋರಿ, ಪಾಂಡ್ಯ ಅಂತಹ ಆಟಗಾರನನ್ನು ಬಿಟ್ಟುಕೊಡಲು ಯಾವುದೇ ಫ್ರಾಂಚೈಸಿ ಇಷ್ಟಪಡಲ್ಲ, ಇಲ್ಲಿ ಹಣದ ಒಪ್ಪಂದದ ಸಮಸ್ಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾರನ್ನು 16 ಕೋಟಿ ರೂ, ಜಸ್ಪ್ರೀತ್ ಬುಮ್ರಾರನ್ನು 12 ಕೋಟಿ ರೂ, ಸೂರ್ಯಕುಮಾರ್ ಯಾದವ್ರನ್ನು 8 ಕೋಟಿ ರೂ ಮತ್ತು ಕೀರನ್ ಪೊಲಾರ್ಡ್ 6 ಕೋಟಿ ರೂಗಳಿಗೆ ರಿಟೈನ್ ಮಾಡಿಕೊಂಡಿದೆ.
ಇದೊಂದು ಸರಳವಾಗಿ ಹಣದ ವಿಷಯವಾಗಿರಬೇಕು. ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯರನ್ನು ಬಯಸದೇ ಇರಲು ಸಾಧ್ಯವೇ ಇಲ್ಲ, ಎಲ್ಲ ಫ್ರಾಂಚೈಸಿಗಳು ಅವರನ್ನು ಬಯಸುತ್ತವೆ. ಆದರೆ ಅವರಿಗೆ ಅಲ್ಲಿ 3ನೇ ಆಟಗಾರನಾಗಿ ಮಾತ್ರ ಆಯ್ಕೆಮಾಡಿಕೊಳ್ಳಲು ಅವಕಾಶವಿದೆ. ಏಕೆಂದರೆ ರೋಹಿತ್ ಶರ್ಮಾ ಮತ್ತು ಬುಮ್ರಾ ಅವರ ಮೊದಲೆರಡು ಆಯ್ಕೆಯ ಆಟಗಾರರಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಕಳೆದ ಮೂರು ವರ್ಷಗಳಿಂದ 11 ಕೋಟಿ ರೂ. ಪಡೆಯುತ್ತಿದ್ದಾರೆ. ಇದೀಗ 3ನೇ ಆದ್ಯತೆಯ ಆಟಗಾರ 8 ಕೋಟಿ ರೂ. ಪಡೆಯಲಿದ್ದಾನೆ. ಹಾಗಾಗಿ ಹಾರ್ದಿಕ್ ಪಾಂಡ್ಯ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿಲ್ಲ. ಅಲ್ಲದೆ, ಹೊಸ ಎರಡೂ ಫ್ರಾಂಚೈಸಿಗಳು ಐಪಿಎಲ್ ಸೇರಿರುವುದರಿಂದ ಪಾಂಡ್ಯ ಗರಿಷ್ಠ ಬೆಲೆ ಪಡೆಯುವ ಸಾಧ್ಯತೆಯಿದೆ. ಇಲ್ಲವಾದರೆ ಮೆಗಾ ಹರಾಜಿನಲ್ಲೂ ದುಬಾರಿ ಆಟಗಾರನಾಗುವುದರಲ್ಲಿ ಯಾವುದೇ ಅಚ್ಚರಿಯಲ್ಲ. ಒಂದು ವೇಳೆ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯರನ್ನು ಹರಾಜಿನಲ್ಲಿ ಖರೀದಿಸದಿದ್ದರೆ 7 ವರ್ಷಗಳ ಫ್ರಾಂಚೈಸಿ ಅಂತ್ಯವಾಗಲಿದೆ.
ಇದನ್ನೂ ಓದಿ:ರಿಟೈನ್ನಲ್ಲಿ ಕೋಟ್ಯಧಿಪತಿಗಳಾದ ಟಾಪ್ 5 ಕ್ರಿಕೆಟಿಗರು ಇವರೇ ನೋಡಿ