ಮುಂಬೈ: ಭಾರತ ತಂಡಕ್ಕೆ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಕೊಡುಗೆ ಅಪಾರ. ಆದರೆ ಧೋನಿ ಹಿಂದೆ ತೋರುತ್ತಿದ್ದ ಪ್ರದರ್ಶನವನ್ನು ಈಗ ತೋರಲು ಸಾಧ್ಯವಿಲ್ಲ. ಹಾಗಾಗಿ ಮೆಗಾ ಹರಾಜಿಗೂ ಮೊದಲು ತಮ್ಮನ್ನು ಏಕೆ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳಬೇಕೆಂದು ಸ್ವತಃ ಧೋನಿ ಪ್ರಶ್ನೆ ಮಾಡಿಕೊಳ್ಳಲಿ ಎಂದು ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಮುಂದೂಡಲ್ಪಟ್ಟಿರುವ 2021ರ ಐಪಿಎಲ್ ಸೆಪ್ಟೆಂಬರ್ನಲ್ಲಿ ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದ ಬೆನ್ನಲ್ಲೇ ಆಕಾಶ್ ಚೋಪ್ರಾ ಮುಂದಿನ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಯಾವ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ವಿಶ್ಲೇಷಣೆ ಮಾಡುತ್ತಾ ಧೋನಿ ಬಗ್ಗೆ ಈ ರೀತಿ ಹೇಳಿದ್ದಾರೆ.
" ಚೆನ್ನೈ ಸೂಪರ್ ಕಿಂಗ್ಸ್ ಧೋನಿಯನ್ನು ಮೊದಲ ಆಯ್ಕೆಯಾಗಿ ರೀಟೈನ್ ಮಾಡಿಕೊಳ್ಳಲಿದೆ. ಖಂಡಿತ ಅವರು ಅದನ್ನು ಮಾಡುತ್ತಾರೆ. ಆದರೆ, ನೀವು ಧೋನಿಯನ್ನೇ ಕೇಳಿದರೆ, ಅವರು ಮುಂದಿನ ಮೂರು ವರ್ಷ ಆಡುವುದಿಲ್ಲ, ಆದ್ದರಿಂದ ನನ್ನನ್ನು ಅವರು ಏಕೆ ರೀಟೈನ್ ಮಾಡಿಕೊಳ್ಳಬೇಕೆಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಅವರು ಧೋನಿ ಮೇಲೆ ಅಷ್ಟು ದೊಡ್ಡ ಮೊತ್ತವನ್ನು ಏಕೆ ವ್ಯಯಿಸಬೇಕು. ಆದರೆ, ಹೇಗಾಗುತ್ತದೆ ಎಂದು ನೋಡಬೇಕಿದೆ" ಎಂದು ಚೋಪ್ರಾ ಹೇಳಿದ್ದಾರೆ.
ಧೋನಿ 2020 ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರು 2019ರ ವಿಶ್ವಕಪ್ ನಂತರ ಆಡಿದ ಸ್ಪರ್ಧಾತ್ಮಕ ಕ್ರಿಕೆಟ್ ಎಂದರೆ ಅದು ಐಪಿಎಲ್ ಮಾತ್ರ. ಅಲ್ಲದೆ ಸಿಎಸ್ಕೆ ಕೂಡ ಧೋನಿ ಮುಂದಿನ ಐಪಿಎಲ್ನಲ್ಲೂ ಆಡಲಿದ್ದಾರೆ ಎಂದು ಹೇಳಿದೆ. ಆದರೆ ಧೋನಿ ಮಾತ್ರ ನಿವೃತ್ತಿ ಬಗ್ಗೆ ಇನ್ನೂ ಯಾವುದೇ ಮಾತನಾಡಿಲ್ಲ.
ಇದನ್ನು ಓದಿ: ಟೆಸ್ಟ್ ಚಾಂಪಿಯನ್ಶಿಪ್ 3 ಪಂದ್ಯಗಳ ಫೈನಲ್ ಆಗಿದ್ದರೆ ಸೂಕ್ತವಾಗಿರುತ್ತಿತ್ತು: ಕಪಿಲ್ ದೇವ್