ಮುಂಬೈ: ಪ್ಲೇ-ಆಫ್ ದೃಷ್ಟಿಯಿಂದ ಸಿಎಸ್ಕೆ ವಿರುದ್ಧ ನಮಗೆ ಸಿಕ್ಕಿರುವ ಅತ್ಯಮೂಲ್ಯ ಗೆಲುವಿದು ಎಂದು ಆರ್ಸಿಬಿ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಅಭಿಪ್ರಾಯಪಟ್ಟರು. ಬುಧವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟ್ ಮಾಡಿ 173 ರನ್ಗಳಿಸಿತ್ತು. ಲೊಮ್ರೋರ್ 42, ಡುಪ್ಲೆಸಿಸ್ 38 ಮತ್ತು ದಿನೇಶ್ ಕಾರ್ತಿಕ್ ಅಜೇಯ 26 ರನ್ಗಳಿಸಿದ್ದರು. 174 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ಉತ್ತಮ ಆರಂಭದ ಹೊರತಾಗಿಯೂ 13 ರನ್ಗಳಿಂದ ಸೋಲುಂಡಿತು. ಇದೇ ವೇಳೆ, ಸತತ 3 ಸೋಲುಗಳ ನಂತರ ಆರ್ಸಿಬಿ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಮತ್ತೆ ಟಾಪ್ 4ಕ್ಕೆ ಪ್ರವೇಶಿಸಿತು.
"ಭಾಗಶಃ ಇಲ್ಲಿಯವರೆಗೆ ಟೂರ್ನಮೆಂಟ್ನಲ್ಲೇ ನಮಗೆ ಸಿಕ್ಕಂತಹ ಗೆಲುವುಗಳಲ್ಲಿ ಇದು ಪ್ರಮುಖವಾದದ್ದು. ಪ್ಲೇ-ಆಫ್ ಪ್ರವೇಶಿಸಲು ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಹಂತದಲ್ಲಿದ್ದೇವೆ. ಈ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ" ಎಂದು ಹೇಜಲ್‌ವುಡ್ ಹೇಳಿದರು.
"ನಾವು ಕಳೆದ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ. ಈ ಪಂದ್ಯದಲ್ಲಿ ನಾವು ಎಲ್ಲಾ ವಿಭಾಗದಲ್ಲಿ ಪ್ರಗತಿ ಸಾಧಿಸಿದ್ದೇವೆ. ಮುಂದಿನ ಹಂತ ಪ್ರವೇಶಿಸಲು ನಮ್ಮೆಲ್ಲಾ ಅವಕಾಶಗಳನ್ನು ಹಿಡಿದಿಟ್ಟುಕೊಂಡಿದ್ದೇವೆ. ಆದ್ದರಿಂದ ಇದುವರೆಗಿನ ಗೆಲುವುಗಳಲ್ಲಿ ಇದು ಪ್ರಮುಖವಾಗಿದೆ" ಎಂದು ವಿವರಿಸಿದರು.
ಪ್ರಸ್ತುತ ಆರ್ಸಿಬಿ 11 ಪಂದ್ಯಗಳನ್ನಾಡಿದ್ದು, 6 ಗೆಲುವು ಮತ್ತು 5 ಸೋಲು ಕಂಡಿದೆ. ಈ ಮುಖೇನ 12 ಅಂಕಗಳನ್ನು ಹೊಂದಿದೆ. ಗುಜರಾತ್ ಮತ್ತು ಲಖನೌ ತಂಡಗಳು ಈಗಾಗಲೇ ತಮ್ಮ ಪ್ಲೇ-ಆಫ್ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದು, ಕೊನೆಯ 2 ಸ್ಥಾನಗಳಿಗೆ ಪೈಪೋಟಿ ಹೆಚ್ಚಾಗಿದೆ. ಉಳಿದ ಮೂರು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ 18 ಅಂಕಗಳನ್ನು ಪಡೆಯಲಿದ್ದು ಮೊದಲೆರಡು ಸ್ಥಾನ ಪಡೆಯುವ ಅವಕಾಶವಿದೆ.
ಇದನ್ನೂ ಓದಿ:ಬ್ಯಾಟ್ಸ್ಮನ್ಗಳ ವೈಫಲ್ಯ ಸೋಲಿಗೆ ಕಾರಣ: ಧೋನಿ