ನವದೆಹಲಿ: ಕೋವಿಡ್-19 ಸೋಂಕಿನಿಂದ ಜನ ರಸ್ತೆಯಲ್ಲಿ ಸಾವನ್ನಪ್ಪುತ್ತಿರುವ ಇಂಥ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನೋಡುವುದು ಅಸಹ್ಯಕರ ಮತ್ತು ಅಹಿತಕರ ಎಂದಿರುವ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್, ಬಿಸಿಸಿಐ ಐಪಿಎಲ್ ಅಯೋಜಿಸಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದೆ ಮೊದಲ ತಪ್ಪು ಎಂದಿದ್ದಾರೆ.
"ಐಪಿಎಲ್ ನಡೆಯುವ ಜಾಗದಲ್ಲಿ ಜನರು ರಸ್ತೆಯ ಮೇಲೆ ಸತ್ತು ಬೀಳುತ್ತಿರುವ ಸಂದರ್ಭದಲ್ಲಿ ಐಪಿಎಲ್ ನೋಡುವುದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಇಲ್ಲಿ ನಾನು ಯಾವುದೇ ಆಟಗಾರರನ್ನು ಧೂಷಿಸುವುದಿಲ್ಲ, ಆದರೆ ಲೀಗ್ಅನ್ನು ನಿಲ್ಲಿಸಲೇಬೇಕಾಗಿತ್ತು" ಎಂದು ಅವರು ಇಂಗ್ಲೀಷ್ ಪತ್ರಿಕೆ ಡೈಲಿ ಮೇಲ್ನಲ್ಲಿ ಬರೆದಿದ್ದಾರೆ.
ಕೆಲವು ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳವಾರ ಬಿಸಿಸಿಐ ಲೀಗ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ಹುಸೇನ್ ಪ್ರಕಾರ ಕಳೆದ ವರ್ಷದಂತೆ ಈ ಆವೃತ್ತಿಯು ಯುಎಇನಲ್ಲೇ ನಡೆಯಬೇಕಿತ್ತು ಎಂದಿದ್ದಾರೆ.
ಭಾರತವನ್ನು ಟೂರ್ನಮೆಂಟ್ ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದೇ ಮೊದಲ ತಪ್ಪು. 6 ತಿಂಗಳ ಹಿಂದೆ ಯುಎಇನಲ್ಲಿ ಐಪಿಎಲ್ ಅದ್ಭುತವಾಗಿ ಜರುಗಿತ್ತು. ಅಲ್ಲಿ ಕೋವಿಡ್ ದರ ಕಡಿಮೆಯಿತ್ತು. ಇನ್ನೂ ಬಯೋಬಬಲ್ನಲ್ಲಿ ಯಾವುದೇ ರಾಜಿಯಿರಲಿಲ್ಲ. ಅವರು ಅಲ್ಲಿಗೆ ಈ ಬಾರಿಯೂ ಮರಳಬೇಕಿತ್ತು ಎಂದು ಹುಸೇನ್ ಹೇಳಿದ್ದಾರೆ.
ಈಗ ಅದನ್ನು ಪಶ್ಚಾತ್ತಾಪದಿಂದ ಹೇಳುವುದು ಸುಲಭ. ಆದರೆ ಈ ವರ್ಷದ ಸ್ಪರ್ಧೆಯನ್ನು ನಡೆಸಲು ನಿರ್ಧರಿಸಿದಾಗ ಭಾರತದಲ್ಲಿ ವೈರಸ್ ಕೆಟ್ಟದಾಗಿರುವುದು ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಟಿ20 ವಿಶ್ವಕಪ್ ನಡೆಸುವುದರ ಕುರಿತು ಜುಲೈನಲ್ಲಿ ಅಂತಿಮ ನಿರ್ಧಾರ