ಮುಂಬೈ: ಸತತ 6 ಸೋಲು ಕಂಡು ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿರುವ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದು, ಗುರುವಾರ 5 ಸೋಲು ಒಂದು ಗೆಲುವು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
5 ಬಾರಿಯ ಚಾಂಪಿಯನ್ಸ್ 2022ರ ಆವೃತ್ತಿಯಲ್ಲಿ ಒಂದೇ ಒಂದು ಗೆಲುವು ಸಾಧಿಸಲಾಗಿಲ್ಲ. ಒಂದು ವೇಳೆ ಗುರುವಾರದ ಪಂದ್ಯದಲ್ಲಿ ಸೋಲು ಕಂಡರೆ ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿದೆ.
ಇತ್ತ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮುಂಬೈಗಿಂತ ಒಂದು ಸ್ಥಾನ ಮೇಲಿದೆ ಎನ್ನುವುದನ್ನು ಬಿಟ್ಟರೆ ತಂಡ ಸಂಪೂರ್ಣ ವೈಫಲ್ಯ ಸಾಧಿಸಿದೆ. ವೈಯಕ್ತಿಕವಾಗಿ ಕೆಲವು ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದರೂ ತಂಡವಾಗಿ ಸಿಎಸ್ಕೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಒಂದೆರಡು ಪಂದ್ಯಗಳಲ್ಲಿ ಗೆಲ್ಲುವ ಹಂತಕ್ಕೆ ಬಂದೂ ಸೋಲು ಕಂಡಿದೆ.
ಮುಂಬೈ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಕಾಣುತ್ತಿದೆ. ನಾಯಕ ರೋಹಿತ್ ಶರ್ಮಾ, 6 ಪಂದ್ಯಗಳಲ್ಲಿ 114 ರನ್ಗಳಿಸಿದ್ದಾರೆ. ಅನುಭವಿ ಪೊಲಾರ್ಡ್ ಮತ್ತು ಆರಂಭಿಕ ಇಶಾನ್ ಕಿಶನ್ ಕೂಡ ರನ್ಗಳಿಸಲು ಪರದಾಡುತ್ತಿದ್ದಾರೆ. ತಂಡದ ಸಕಾರಾತ್ಮಕ ಅಂಶವೆಂದರೆ ಯುವ ಬ್ಯಾಟರ್ಗಳಾದ ಬ್ರೇವಿಸ್ ಮತ್ತು ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದು ಮುಂಬೈ ಪಂದ್ಯದಲ್ಲಿ ಪೈಪೋಟಿ ನೀಡುವಂತೆ ಮಾಡುತ್ತಿದ್ದಾರೆ.
ಬೌಲಿಂಗ್ ಬಳಗ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಬುಮ್ರಾ ರನ್ಗೆ ಕಡಿವಾಣ ಹಾಕುತ್ತಿದ್ದಾರೆಯೇ ಹೊರತು ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇವರಿಗೆ ಸೂಕ್ತ ಬೆಂಬಲ ಕೂಡ ಸಿಗುತ್ತಿಲ್ಲ. ತೈಮಲ್ ಮಿಲ್ಸ್ ದಾರಾಳವಾಗಿ ರನ್ ಬಿಟ್ಟುಕೊಡುತ್ತಿದ್ದಾರೆ. ಉನಾದ್ಕಟ್ ಮತ್ತು ಮುರುಗನ್ ಅಶ್ವಿನ್ ಸರಾಸರಿ ಪ್ರದರ್ಶನ ನೀಡುತ್ತಿದ್ದಾರೆ.
ಋತುರಾಜ್ ಗಾಯಕ್ವಾಡ್ ಫಾರ್ಮ್ಗೆ ಮರಳಿರುವುದು ಸಿಎಸ್ಕೆ ತಂಡಕ್ಕೆ ಸಮಾಧಾನ ತಂದಿದೆ. ಉತ್ತಪ್ಪ, ಶಿವಂ ದುಬೆ ಆರ್ಸಿಬಿ ವಿರುದ್ಧ ಅಬ್ಬರಿಸಿದರೂ, ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ವೈಫಲ್ಯ ಅನುಭವಿಸಿದರು. ಸಿಎಸ್ಕೆ ಕ್ಯಾಂಪ್ನಲ್ಲಿ ದೊಡ್ಡ ಸಮಸ್ಯೆ ಎಂದರೆ ರಾಯುಡು ಮತ್ತು ಮೊಯೀನ್ ಅಲಿ ಸತತ ವೈಫಲ್ಯ. ಇವರಿಬ್ಬರು ನಾಳಿನ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಅಗತ್ಯವಿದೆ.
ಬೌಲಿಂಗ್ ವಿಭಾಗದಲ್ಲಿ ಬ್ರಾವೋ ಮತ್ತು ತೀಕ್ಷಣ ಆಸಕ್ತಿಕರ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಕ್ರಿಸ್ ಜೋರ್ಡನ್ ಮತ್ತು ಮುಕೇಶ್ ಚೌದರಿ ಸಿಕ್ಕಾಬಟ್ಟೆ ರನ್ ಬಿಟ್ಟುಕೊಡುತ್ತಿದ್ದಾರೆ. ಜೋರ್ಡನ್ ಗುಜರಾತ್ ವಿರುದ್ಧ 58 ರನ್ ಬಿಟ್ಟುಕೊಡುವ ಮೂಲಕ ಗೆಲ್ಲುವ ಪಂದ್ಯವನ್ನು ಕೈಜಾರಲು ಕಾರಣವಾಗಿದ್ದರು. ಆದರೆ ನಾಳೆ ಇವರ ಬದಲಿಗೆ ನಾಳೆ ಬೇರೆ ಬೌಲರ್ ಕಣಕ್ಕಿಳಿಯುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ:16 ವರ್ಷ ಕಳೆದರೂ ಎಂಎಸ್ ಧೋನಿಯ ಈ ದಾಖಲೆ ಯಾರಿಂದಲೂ ಮುರಿಯಲಾಗಿಲ್ಲ