ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವ ಕ್ರಿಕೆಟ್ನಲ್ಲಿ ಎರಡು ತಿಂಗಳು ನಡೆಯುವ ಹಬ್ಬ. ಅಭಿಮಾನಿಗಳಿಗೆ ಮನರಂಜನೆ, ಕೆಲವರಿಗೆ ಕ್ರಿಕೆಟಿಗರಿಗೆ ಹೆಸರು ತಂದುಕೊಟ್ಟರೆ, ಇನ್ನೂ ಕೆಲವರಿಗೆ ಜೀವನವನ್ನೇ ಕಟ್ಟಿಕೊಡಲಿದೆ. ಅಲ್ಲದೆ ಇದು ಯುವ ಆಟಗಾರರಿಗೆ ಭವಿಷ್ಯವನ್ನು ರೂಪಿಸಿಕೊಡುವ ದಾರಿದೀಪ ಕೂಡ.
ಐಪಿಎಲ್ ಪ್ರತಿಭೆಗಳನ್ನು ಗುರುತಿಸುವ ದೊಡ್ಡ ವೇದಿಕೆಯಾಗಿದೆ. ಇದು ಕೇವಲ ಪ್ರತಿಭಾನ್ವೇಷಣೆ ಕಾರ್ಯದಲ್ಲಿ ಮಾತ್ರವಲ್ಲದೆ, ಪ್ರತಿಭಾನ್ವಿತರಿಗೆ ಅವರ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲವನ್ನು ಶ್ರೀಮಂತ ಲೀಗ್ ನೀಡುತ್ತಿದೆ. ಈಗಾಗಲೇ ಲಕ್ಷಗಳನ್ನೇ ನೋಡದ ಮಧ್ಯಮ ವರ್ಗದ ಕ್ರಿಕೆಟಿಗರು ಕೋಟಿ ರೂ. ಪಡೆದು ತಮ್ಮ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ.
ಪ್ರತಿ ವರ್ಷ ಇಂತಹ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. 200-300 ರೂ.ಗಳಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಬಡ ಕುಟಂಬದಿಂದ ಬಂದಿದ್ದ ನವದೀಪ್ ಸೈನಿ, ಚೇತನ್ ಸಕಾರಿಯಾ, ಯಶಸ್ವಿ ಜೈಸ್ವಾಲ್ ಈಗಾಗಲೇ ಐಪಿಎಲ್ನಲ್ಲಿ ಕೋಟಿಗಟ್ಟಲೇ ಹಣ ಪಡೆದು ಆಡುತ್ತಿದ್ದಾರೆ. ಇದೀಗ ಆ ಸಾಲಿಗೆ ಉತ್ತರ ಪ್ರದೇಶದ 24 ವರ್ಷದ ರಿಂಕು ಸಿಂಗ್ ಕೂಡ ಸೇರಿದ್ದಾರೆ.
9ನೇ ತರಗತಿ ಪಾಸ್ ಮಾಡದ ಹುಡುಗ : ತಂದೆ ಎಲ್ಪಿಜಿ ಸಿಲಿಂಡರ್ ವಿತರಿಸುವ ಕೆಲಸ ಮಾಡುತ್ತಿದ್ದರೆ, ಅಣ್ಣ ಆಟೋ ಡ್ರೈವರ್. ರಿಂಕು 9ನೇ ತರಗತಿಯನ್ನು ಪಾಸ್ ಮಾಡದ ಹುಡುಗ. ಒಂದು ಕಾಲದಲ್ಲಿ ಜೀವನ ನಿರ್ವಹಣೆಗೋಸ್ಕರ ಕಸ ಗೂಡಿಸುವ ಕೆಲಸವನ್ನು ಇವರು ಮಾಡಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಕೆಲವು ಸಮಯ ಅಣ್ಣನ ಆಟೋ ಚಾಲನೆ ಕೂಡ ಮಾಡಿದ್ದಾರೆ.
ಇಷ್ಟೆಲ್ಲಾ ಕಷ್ಟಪಟ್ಟರು ತಮ್ಮಿಷ್ಟದ ಕ್ರಿಕೆಟ್ ಆಡುವುದನ್ನು ಮಾತ್ರ ರಿಂಕು ಬಿಡಲಿಲ್ಲ. ಆಲಿಘರ್ನ ಸಣ್ಣ ಮಧ್ಯಮ ಕುಟುಂಬದಲ್ಲಿ ಜನಿಸಿದ ರಿಂಕು, ಅಪ್ಪ ಕೆಲಸ ಮಾಡುವ ಗ್ಯಾಸ್ ಏಜೆನ್ಸಿಯ ಕಾಂಪೌಂಡ್ನಲ್ಲಿದ್ದ 2 ರೂಮಿನಲ್ಲಿ ಕುಟುಂಬದ ಜೊತೆ ವಾಸ ಮಾಡಿಕೊಂಡಿದ್ದರು. ತಂದೆ ತಿಂಗಳಿಗೆ 6-7 ಸಾವಿರ ಸಂಪಾದಿಸುತ್ತಿದ್ದರು.
ಬದುಕಿನ ಅನಿವಾರ್ಯತೆಗೆ ಒಗ್ಗಿಕೊಂಡು : ಅಪ್ಪನಿಗೆ ನೆರವಾಗಲು ಅಣ್ಣ ಆಟೋ ಓಡಿಸುತ್ತಿದ್ದರು. ಹಾಗಾಗಿ, ರಿಂಕುಗೆ ಕ್ರಿಕೆಟ್ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಕೆಲವು ಕೆಲಸಗಳನ್ನು ಮಾಡಲೇಬೇಕಾಗಿತ್ತು. ಆದರೆ, 2017ರ ಐಪಿಎಲ್ ರಿಂಕು ಸಿಂಗ್ಗೆ ವೇದಿಕೆ ಕಲ್ಪಿಸಿಕೊಟ್ಟಿತು. ಪಂಜಾಬ್ ತಂಡ ಅವರನ್ನು 10 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಈ ಮೊತ್ತ ಅವರ ಜೀವನ ಬದಲಿಸದಿದ್ದರೂ ಸಾಲವನ್ನು ತೀರಿಸಲು ಸಾಧ್ಯವಾಯಿತು. ಆದರೆ, ಅವರ ಅದೃಷ್ಟ ಬದಲಾಗಿದ್ದು 2018ರ ಮೆಗಾ ಹರಾಜಿನಲ್ಲಿ.
ಆಗೊಂದು ಈಗೊಂದು ಅವಕಾಶವಷ್ಟೇ.. : ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 80 ಲಕ್ಷ ರೂ.ಗಳಿಗೆ ರಿಂಕು ಸಿಂಗ್ರನ್ನು ಖರೀದಿಸಿತು. ಇದು ಅವರ ಜೀವನವನ್ನೇ ಬದಲಿಸಿತು. ಸಣ್ಣ ಮನೆಯಿಂದ ದೊಡ್ಡ ಮನೆಗೆ ಹೋಗುವುದಕ್ಕೆ, ತಂಗಿಯರನ್ನು ಓದಿಸುವುದಕ್ಕೆ ಸೇರಿದಂತೆ ಕುಟುಂಬದ ಎಲ್ಲ ಸಮಸ್ಯೆಗಳನ್ನು ರಿಂಕು ಈ ಹಣದಿಂದ ಬಗೆಹರಿಸಿಕೊಂಡರು. 2021ರವರೆಗೆ ತಂಡದಲ್ಲಿದ್ದ ರಿಂಕು ಇದೇ ಮೊತ್ತವನ್ನು ಪಡೆದಿದ್ದರು.
ಹಣವೇನು ಗಳಿಸಿಕೊಂಡರಾದರೂ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳಲು ಆಗಿರಲಿಲ್ಲ. 4 ವರ್ಷಗಳಲ್ಲಿ ಅವರಿಗೆ ತಂಡದಲ್ಲಿ ಆಗೊಂದು ಈಗೊಂದು ಎಂದು ಅವಕಾಶ ಸಿಕ್ಕಿದ್ದು 11 ಪಂದ್ಯಗಳಲ್ಲಿ ಮಾತ್ರ. ಅದರಲ್ಲಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲ 5 ವರ್ಷಗಳಲ್ಲಿ ಕೇವಲ 11 ಪಂದ್ಯಗಳನ್ನಾಡಿದ್ದ ರಿಂಕು ಸಿಂಗ್ ಕಳೆದ 3 ಪಂದ್ಯಗಳಲ್ಲೂ ಅವಕಾಶ ಪಡೆಯುವಲ್ಲಿ ಯಶಸ್ವಿಯಾದರು.
ಕಸ ಗುಡಿಸ್ತಿದ್ದ, ಆಟೋ ಓಡಿಸ್ತಿದ್ದವ : ಮೊದಲ ಪಂದ್ಯದಲ್ಲಿ 35(28), 2ನೇ ಪಂದ್ಯದಲ್ಲಿ 23(16) ರನ್ಗಳಿಸಿದ್ದರು. ಅವರು ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧ 23 ಎಸೆತಗಳಲ್ಲಿ ಅಜೇಯ 42 ರನ್ಗಳಿಸಿ ಕೆಕೆಆರ್ಗೆ ಗೆಲುವು ತಂದುಕೊಟ್ಟರು. ಅಲ್ಲದೆ ಕೆಕೆಆರ್ ತಂಡದ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದಾರೆ.
9ನೇ ತರಗತಿಯನ್ನು ಪೂರ್ಣಗೊಳಿಸದ, ಜೀವನೋಪಾಯಕ್ಕಾಗಿ ಕಸ ಗೂಡಿಸುವ ಕೆಲಸ, ಆಟೋ ಚಾಲನೆ ಮಾಡಿ ಸಾಕಷ್ಟು ಕಷ್ಟಪಟ್ಟಿದ್ದ ಯುವಕ, ತನ್ನ ಒಂದು ಅದ್ಭುತ ಇನ್ನಿಂಗ್ಸ್ನಿಂದ ಇಂದು ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಈ ಮೂಲಕ ತಾವೂ ಇಷ್ಟು ವರ್ಷ ಪಟ್ಟ ಕಷ್ಟಕ್ಕೆ ಪ್ರತಿಫಲವನ್ನು ಪಡೆದಿದ್ದಾರೆ.
ಇದನ್ನೂ ಓದಿ:ಸನ್ ರೈಸರ್ಸ್ಗೆ ಏಟಿನ ಮೇಲೆ ಏಟು.. ಮತ್ತೆ ಸ್ಟಾರ್ ಆಲ್ರೌಂಡರ್ ತಂಡದಿಂದ ಹೊರಕ್ಕೆ