ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2016ರ ಐಪಿಎಲ್ನಲ್ಲಿ ಫೈನಲ್ ತಲುಪಿದ ನಂತರ ಸತತ 3 ಬಾರಿ ಯಾವ ತಂಡವೂ ಕಂಡಿರದಂತಹ ಹೀನಾಯ ಸ್ಥಿತಿ ತಲುಪಿತ್ತು. ಆದರೆ 2020ರ ರಲ್ಲಿ ಅದ್ಭುತ ರೀತಿಯಲ್ಲಿ ಕಮ್ಬ್ಯಾಕ್ ಮಾಡಿ ಪ್ಲೇ ಆಫ್ ತಲುಪಿದ್ದ ಬೆಂಗಳೂರು ಫ್ರಾಂಚೈಸಿ ಈ ವರ್ಷವೂ ಕೆಲವು ಫ್ರಾಬಲ್ಯಯುತ ಗೆಲುವುಗಳೊಂದಿಗೆ ಸತತ 2ನೇ ಬಾರಿ ಪ್ಲೇ ಆಫ್ ತಲುಪಿದೆ.
ಮೊದಲಾರ್ಧದಲ್ಲಿ 7ರಲ್ಲಿ 5 ಗೆಲುವು ಪಡೆದಿದ್ದ ವಿರಾಟ್ ಬಳಗ ದ್ವಿತೀಯಾರ್ಧದದಲ್ಲಿ ಆರಂಭದಲ್ಲಿ ಮುಗ್ಗರಿಸಿದರೂ ಆಡಿದ 7 ಪಂದ್ಯಗಳಲ್ಲಿ 4 ಗೆಲುವು ಮತ್ತು 3 ಸೋಲು ಪಡೆದು 2021ರ ಲೀಗ್ನಲ್ಲಿ ಅಗ್ರ 3ರಲ್ಲಿ ಮುಗಿಸಿದೆ. ಈ ಮೂಲಕ ಸತತ 2ನೇ ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಈ ಯಶಸ್ಸಿನ ಶ್ರೇಯ ತಂಡದ ಬೌಲರ್ಗಳು ಮತ್ತು ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ಗೆ ಸಲ್ಲುತ್ತದೆ. ಏಕೆಂದರೆ ತಂಡದ ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ ಯುಎಇಯ ಕಠಿಣ ಪಿಚ್ಗಳಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
2020ರ ಐಪಿಎಲ್ನಲ್ಲಿ ಕೇವಲ ಒಂದೇ ಒಂದು ಸಿಕ್ಸರ್ ಮತ್ತು ಅರ್ಧಶತಕ ಸಿಡಿಸಲಾಗದ ಮ್ಯಾಕ್ಸ್ವೆಲ್ರನ್ನು ಖರೀದಿಸುವುದು ಮೂರ್ಖತನ. ಅವರ ಹಿಂದೆ ಹೋಗಬಾರದೆಂದೂ ಹಲವು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟರೂ, ಆರ್ಸಿಬಿ ಮತ್ತು ನಾಯಕ ವಿರಾಟ್ ಕೊಹ್ಲಿ ಆಸೀಸ್ ಆಲ್ರೌಂಡರ್ ಮೇಲೆ ನಂಬಿಕೆಯಿಟ್ಟು ಬರೋಬ್ಬರಿ 14.25 ಕೋಟಿ ರೂ ಖರೀದಿಸಿತ್ತು. ಇದೀಗ ತಮ್ಮ ಮೇಲೆ ಫ್ರಾಂಚೈಸಿ ಮತ್ತು ನಾಯಕ ಇಟ್ಟಿದ್ದ ನಂಬಿಕೆಯ ಜೊತೆಗೆ ತಾವು ತೆಗೆದುಕೊಂಡ ಬೆಲೆಗೆ ತಕ್ಕ ಆಟ ಆಡಿ ಸೈ ಎನಿಸಿಕೊಂಡಿದ್ದಾರೆ.
ಮ್ಯಾಕ್ಸ್ವೆಲ್ 2021ರಲ್ಲಿ ಆಡಿರುವ 13 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 39, 59 ,78,22, 25,0,10,11,56, 50, 57, 40, 51 ರನ್ಗಳಿಸಿದ್ದಾರೆ. ಒಟ್ಟಾರೆ 6 ಅರ್ಧಶತಕ ಸೇರಿದಂತೆ 498 ರನ್ಗಳಿಸಿ ಲೀಗ್ನಲ್ಲಿ ಗರಿಷ್ಠ ರನ್ಗಳಿಸಿದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅದರಲ್ಲೂ ಯುಎಇಯಲ್ಲಿ ಆಡಿರುವ 7 ಪಂದ್ಯಗಳಿಂದ 254 ರನ್ ಗಳಿಸಿದ್ದಾರೆ.
ಒಟ್ಟಿನಲ್ಲಿ ಎಬಿ ಡಿ ವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯ ಮೇಲೆ ಅವಲಂಭಿತರಾಗಿರುತ್ತಿದ್ದ ತಂಡಕ್ಕೆ ಮ್ಯಾಕ್ಸ್ವೆಲ್ ಸೇರ್ಪಡೆ ಸಾಕಷ್ಟು ಒತ್ತಡವನ್ನು ಕಡಿಮೆ ಮಾಡಿದೆ. ಈ ಆವೃತ್ತಿಯಲ್ಲಿ ಮೊದಲಾರ್ಧದಲ್ಲಿ ವಿಲಿಯರ್ಸ್ ಉತ್ತಮ ಪ್ರದರ್ಶನ ತೋರಿದರೆ 2ನೇ ಹಂತದಲ್ಲಿ ಮ್ಯಾನೇಜ್ಮೆಂಟ್ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ ಮ್ಯಾಕ್ಸ್ವೆಲ್ ಎಬಿಡಿ ವೈಫಲ್ಯತೆಯನ್ನು ತಮ್ಮ ಪ್ರದರ್ಶನದ ಮೂಲಕ ಮರೆ ಮಾಡಿದ್ದಾರೆ. ಇದೀಗ ಪ್ಲೇ ಆಫ್ ತಲುಪಿರುವ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲಬೇಕಾದರೆ ಮ್ಯಾಕ್ಸ್ವೆಲ್ಗೆ ಕೊಹ್ಲಿ, ಎಬಿಡಿ ಸಾಥ್ ನೀಡಿದರೆ 14 ವರ್ಷಗಳ ಐಪಿಎಲ್ ಟ್ರೋಫಿ ಎತ್ತ ಹಿಡಿಯುವ ಆರ್ಸಿಬಿ ಕನಸು ನನಸಾಗಲಿದೆ.
ಇದನ್ನು ಓದಿ:ಐಪಿಎಲ್ನಲ್ಲಿ 100ನೇ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು