ಗ್ರೆನಡಾ: ಸತತ 5 ಟಿ20 ಸರಣಿಗಳನ್ನು ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸೋಲಿನ ಸರಪಳಿ ಕಳಚಿದೆ. ಶನಿವಾರ ನಡೆದ ಪಂದ್ಯದಲ್ಲಿ 25 ರನ್ಗಳ ಜಯ ಸಾಧಿಸುವ ಮೂಲಕ 3-2ರಲ್ಲಿ ಸರಣಿ ಗೆಲುವು ಸಾಧಿಸಿತು.
ಈ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ಪಾಕಿಸ್ತಾನದ ವಿರುದ್ಧ 2 ಸರಣಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಕಳೆದುಕೊಂಡಿತ್ತು. 2018ರಲ್ಲಿ ಕೊನೆಯ ಬಾರಿ ಶ್ರೀಲಂಕಾ ವಿರುದ್ಧ ಟಿ20 ಸರಣಿ ಜಯಿಸಿತ್ತು.
ಗ್ರೆನೆಡಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 168 ರನ್ಗಳಿಸಿತ್ತು. ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 60 ಮತ್ತು ಐಡೆನ್ ಮಾರ್ಕ್ರಮ್ 48 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ 70 ರನ್ಗಳಿಸಿದ್ದರು.
169 ರನ್ಗಳ ಗುರಿ ಪಡೆದ ವಿಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 143ರನ್ಗಳಿಸಲಷ್ಟೆ ಶಕ್ತವಾಗಿ 25 ರನ್ಗಳಿಂದ ಸೋಲುಕಂಡಿತು.
ಎವಿನ್ ಲೂಯಿಸ್ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 52 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 24ಕ್ಕೆ 2, ಲುಂಗಿ ಎಂಗಿಡಿ 32ಕ್ಕೆ 3, ವಿಯಾನ್ ಮಲ್ಡರ್ 31ಕ್ಕೆ 2 ಹಾಗೂ ತಬ್ರೈಜ್ ಶಂಸಿ 4 ಓವರ್ಗಳಲ್ಲಿ ಕೇವಲ 11 ರನ್ ನೀಡಿ 1 ವಿಕೆಟ್ ಪಡೆದು ಗೆಲುವಿನ ರೂವಾರಿಗಳಾದರು.
ಇದನ್ನೂ ಓದಿ:ಮಿಥಾಲಿ ಮಿಂಚಿನ ಆಟ: ಕೊನೆಯ ಪಂದ್ಯ ಗೆದ್ದು ಗೌರವ ಉಳಿಸಿಕೊಂಡ ಭಾರತ