ನವದೆಹಲಿ : ಭಾರತದಲ್ಲಿ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ರಾಷ್ಟ್ರಗಳು ಭಾರತದಿಂದ ಬರುವ ವಿಮಾನಗಳಿಗೆ ನಿಷೇಧ ಹೇರಿವೆ.
ಈ ಕಾರಣದಿಂದ ಕೆಲವು ಕ್ರಿಕೆಟಿಗರು ಐಪಿಎಲ್ ತೊರೆದು ತವರಿಗೆ ಮರಳಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಕ್ರಿಸ್ ಲಿನ್ ತಾವು ಇಲ್ಲಿ ಸುರಕ್ಷಿತವಾಗಿದ್ದು, ಐಪಿಎಲ್ ಮುಗಿದ ಮೇಲೆ ತಮ್ಮನ್ನು ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ, ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಭಾರತದಲ್ಲಿ ಎರಡನೇ ಹಂತದ ಕೋವಿಡ್ ಹರಡುತ್ತಿದ್ದಂತೆ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ.
ಮೂವರು ಆಟಗಾರರು ತವರಿಗೆ ಮರಳಿದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಎಲ್ಲಾ ಆಟಗಾರರನ್ನು ಸಂಪರ್ಕಿಸಿ, ಇಲ್ಲಿನ ಪರಿಸ್ಥಿತಿಯ ಬಗ್ಗೆ ವಿಚಾರಿಸಿದೆ. ಈ ಸಂದರ್ಭದಲ್ಲಿ ಕ್ರಿಸ್ ಲಿನ್ ಬಯೋಬಬಲ್ ಸುರಕ್ಷಿತವಾಗಿದೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ನಮ್ಮೆಲ್ಲ ಆಟಗಾರರನ್ನು ಚಾರ್ಟಡ್ ಫ್ಲೈಟ್‌ನಲ್ಲಿ ಕರಿಳಿಸಿಕೊಳ್ಳಬೇಕೆಂದು ಕ್ರಿಸ್ ಲಿನ್ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೀಗ್ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರ ಐಪಿಎಲ್ ಒಪ್ಪಂದದ ವೇಳೆ ಶೇ.10ರಷ್ಟು ಹಣವನ್ನು ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಲಾಗುತ್ತದೆ. ಹಾಗಾಗಿ, ಟೂರ್ನಮೆಂಟ್ ಮುಗಿದ ಬಳಿಕ ಈ ವರ್ಷ ಆ ಹಣದಲ್ಲಿ ವಿಶೇಷ ವಿಮಾನ ವ್ಯವಸ್ಥೆ ಮಾಡಿ ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಸಿಎಗೆ ಸಂದೇಶ ರವಾನಿಸಿದ್ದೇನೆ ಎಂದು ಲಿನ್ ತಿಳಿಸಿದ್ದಾರೆ.
ಇಲ್ಲಿ ಸಾಕಷ್ಟು ಜನರು ನಮಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಆದರೆ, ನಾವು ಕಠಿಣ ಬಯೋಬಬಲ್ನಲ್ಲಿದ್ದೇವೆ. ನಾವೆಲ್ಲರೂ ಮುಂದಿನ ವಾರ ಲಸಿಕೆ ಪಡೆಯಲಿದ್ದೇವೆ. ಸರ್ಕಾರ ಖಾಸಗಿ ವಿಮಾನದ ಮೂಲಕ ತಮ್ಮನ್ನು ವಾಪಸ್ ತವರಿಗೆ ಕರೆಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಲಿನ್ ಹೇಳಿದ್ದಾರೆ.
14ನೇ ಐಪಿಎಲ್ ಲೀಗ್ ಹಂತದ ಪಂದ್ಯಗಳು ಮೇ 23ಕ್ಕೆ ಮುಕ್ತಾಯವಾಗಲಿವೆ. ಇದಾದ ಬಳಿಕ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೇ 30ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ , ಪ್ಯಾಟ್ ಕಮ್ಮಿನ್ಸ್ ಸೇರಿದಂತೆ 14 ಆಸ್ಟ್ರೇಲಿಯಾ ಆಟಗಾರರು ಟೂರ್ನಿಯಲ್ಲಿ ಸಕ್ರಿಯರಾಗಿದ್ದಾರೆ. ಕೋಚ್ಗಳಾಗಿರುವ ಸೈಮನ್ ಕ್ಯಾಟಿಚ್ ಮತ್ತು ರಿಕಿ ಪಾಂಟಿಂಗ್ ಕೂಡ ತಮ್ಮ ತಂಡಗಳ ಜೊತೆ ಇದ್ದಾರೆ.
ಇದನ್ನು ಓದಿ:ತಂಡ ತೊರೆದು ತವರಿಗೆ ಮರಳಲಿರುವ ವಾರ್ನರ್, ಸ್ಟೀವ್ ಸ್ಮಿತ್?