ಹೈದರಾಬಾದ್: 2022ರ ಐಪಿಎಲ್ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿವೆ. ಇದೀಗ ತಂಡಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಈ ಆಟಗಾರರ ಹೆಸರುಗಳನ್ನು ನೀಡಿದೆ ಎಂದು ಸುದ್ದಿಸಂಸ್ಥೆ ಪಿಟಿಐ ತಿಳಿಸಿದೆ.
ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಲಕ್ನೋ ತಂಡ ಕನ್ನಡಿಗ ಕೆ.ಎಲ್.ರಾಹುಲ್ಗೆ 15 ಕೋಟಿ ರೂ. ನೀಡಿದ್ದು, ಉಳಿದಂತೆ 11 ಕೋಟಿ ರೂ ನೀಡಿ ಸ್ಟೋಯ್ನಿಸ್ ಹಾಗೂ 4 ಕೋಟಿ ರೂ. ನೀಡಿ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಆಯ್ಕೆ ಮಾಡಿದೆ. ವಿದೇಶಿ ಆಟಗಾರನ ಕೋಟಾದಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ತಂಡ ಸೇರಿಸಿಕೊಂಡಿದೆ.

ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡದ ಪರ ಆಡಿರುವ ಬಿಷ್ಣೋಯ್ ಅನ್ಕ್ಯಾಪ್ಡ್ ಪ್ಲೇಯರ್ ಆಗಿದ್ದು, ಹೆಚ್ಚು ಗಮನ ಸೆಳೆದಿದ್ದರು. ಹೀಗಾಗಿ ಈ ಯಂಗ್ ಪ್ಲೇಯರ್ಗೆ ಫ್ರಾಂಚೈಸಿ ಮಣೆ ಹಾಕಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸ್ಟೋಯ್ನಿಸ್ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದು, ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
2013ರಲ್ಲಿ ಐಪಿಎಲ್ನಲ್ಲಿ ಆರ್ಸಿಬಿ ಪರ ಪದಾರ್ಪಣೆ ಮಾಡಿದ್ದ ರಾಹುಲ್, 2014ರಲ್ಲಿ ಸನ್ರೈಸರ್ಸ್ ಹೈದರಾಬಾದ್, ಇದಾದ ಬಳಿಕ 2016ರಲ್ಲಿ ಆರ್ಸಿಬಿ ಸೇರಿದ್ದರು. ಆದರೆ, 2018ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ತಂಡ 11 ಕೋಟಿ ರೂ. ನೀಡಿ ಖರೀದಿಸಿತ್ತು. ಜೊತೆಗೆ, ನಾಯಕನಾಗಿ ನೇಮಕ ಮಾಡಿತ್ತು.
ಸ್ಟೋಯ್ನಿಸ್ 2015ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದು, 27 ಪಂದ್ಯಗಳಿಂದ 441 ರನ್ಗಳಿಕೆ ಹಾಗು 15 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ ಅವರು ಪಂಜಾಬ್, ಆರ್ಸಿಬಿ ಪರ ಸಹ ಕಣಕ್ಕಿಳಿದಿದ್ದಾರೆ.
ಯಂಗ್ ಪ್ಲೇಯರ್ ಬಿಷ್ಣೋಯ್ 2020ರ ಅಂಡರ್ 19 ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಹೀಗಾಗಿ ಪಂಜಾಬ್ ತಂಡ 2 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ಲಕ್ನೋ ತಂಡ ಈ ಪ್ಲೇಯರ್ಗೆ ಮಣೆ ಹಾಕಿದೆ.

ಅಹ್ಮಮದಾಬಾದ್ ತಂಡ ಹಾರ್ದಿಕ್ ಪಾಂಡ್ಯಾ, ರಾಶೀದ್ ಖಾನ್ ಹಾಗೂ ಶುಬ್ಮನ್ ಗಿಲ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಈ ತಂಡಕ್ಕೆ ಈಗಾಗಲೇ ನೆಹ್ರಾ ಕೋಚ್ ಆಗಿದ್ದಾರೆ. ಗ್ಯಾರಿ ಕಸ್ಟನ್ ಮಾರ್ಗದರ್ಶಕರಾಗಿದ್ದಾರೆ.