ಮುಂಬೈ: ಮೆಗಾ ಹರಾಜಿಗೆ ಕೇವಲ ಒಂದು ತಿಂಗಳ ಅಂತರವಿದೆ. ಈ ಬಾರಿ 8ರ ಬದಲು 10 ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಇದಕ್ಕೂ ಹೊಸದಾಗಿ ಸೇರ್ಪಡೆಗೊಂಡಿರುವ 2 ಫ್ರಾಂಚೈಸಿಗಳು ಆಟಗಾರರನ್ನು ನೇರವಾಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದರಿಂದ ಜನವರಿ 31ರ ಒಳಗೆ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
2022ರ ಐಪಿಎಲ್ಗಾಗಿ ಲಖನೌ ಮತ್ತು ಅಹ್ಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಈಗಾಗಲೇ 8 ತಂಡಗಳು ತಮ್ಮ ರಿಟೈನ್ ಆಟಗಾರರನ್ನು ಘೋಷಿಸಿಕೊಂಡಿವೆ. ಇದೀಗ ಉಳಿದಿರುವ 2 ಫ್ರಾಂಚೈಸಿಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಲಖನೌ ಫ್ರಾಂಚೈಸಿ ಕನ್ನಡಿಗ ಕೆ ಎಲ್ ರಾಹುಲ್ ರನ್ನು ನಾಯಕರನ್ನಾಗಿ ಘೋಷಿಸುವುದು ಈಗಾಗಲೇ ಬಹುತೇಕ ಪಕ್ಕಾ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯುಳಿದಿದೆ. ಆದರೆ ಉಳಿದಿರುವ 2 ಸ್ಥಾನಗಳಿಗೆ ಒಬ್ಬ ವಿದೇಶಿ ಮತ್ತು ಮತ್ತೊಬ್ಬ ದೇಶಿಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಸಂಜಯ್ ಗೋಯಂಕಾ ಒಡೆತನದ ಫ್ರಾಂಚೈಸಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ರನ್ನು ಖರೀದಿಸಲು ಬಯಸಿದೆ. ಆದರೆ ಅಹ್ಮದಾಬಾದ್ ಫ್ರಾಂಚೈಸಿ ಕೂಡ ರಶೀದ್ ಹಿಂದೆ ಬಿದ್ದಿದೆ. ಒಂದು ವೇಳೆ ಅಫ್ಘಾನ್ ಸ್ಪಿನ್ನರ್ರನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅಥವಾ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ ಎನ್ನಲಾಗ್ತಿದೆ. ಈಗಾಗಲೇ ಆ ಆಟಗಾರರೊಂದಿಗೆ ಮಾತುಕತೆಯನ್ನು ಕೂಡ ನಡೆಸಿದೆ ಎಂದು ತಿಳಿದುಬಂದಿದೆ.
ಕೆ ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾಯಕನಾಗಿದ್ದರೂ ಸಹ ತಂಡವನ್ನು ತ್ಯಜಿಸಿ ಹೊರಬಂದಿದ್ದರು. ಇತ್ತ ರಶೀದ್ ಖಾನ್ ತಮ್ಮನ್ನ ಗರಿಷ್ಠ ಬೆಲೆಯ ಅಟಗಾರನಾಗಿ ರಿಟೈನ್ ಮಾಡಿಕೊಳ್ಳದ್ದಕ್ಕೆ ಹೈದರಾಬಾದ್ ಬಿಟ್ಟುಬಂದಿದ್ದಾರೆ. ಇವರಿಬ್ಬರು ಹೊಸ ತಂಡಗಳಿಗೆ ಸೇರುವುದು ಖಚಿತವಾಗಿದ್ದರೂ ಯಾವ ತಂಡ ಎನ್ನುವುದು ಜನವರಿ 31ರೊಳಗೆ ತಿಳಿಯಲಿದೆ.
ಇದನ್ನೂ ಓದಿ:ಈ ಮೂವರು ಆಟಗಾರರ ಮೇಲೆ ಅಹ್ಮದಾಬಾದ್ ಕಣ್ಣು, ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ: ವರದಿ