ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ 450 ವಿಕೆಟ್ ಪಡೆದುಕೊಂಡಿರುವ ಅಶ್ವಿನ್ರನ್ನೇ ಕೈಬಿಟ್ಟ ಮೇಲೆ ಟಿ-20 ಕ್ರಿಕೆಟ್ನಿಂದ ಕೊಹ್ಲಿಯನ್ನ ಏಕೆ ಕೈಬಿಡಬಾರದು ಎಂದು ಮಾಜಿ ಕ್ರಿಕೆಟರ್ ಕಪಿಲ್ ದೇವ್ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ ಅವರನ್ನು ಬೆಂಚ್ ಕಾಯಿಸಲಾಗಿತ್ತು. ಅದೇ ರೀತಿ ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿಯನ್ನು ಟಿ-20 ತಂಡದಲ್ಲಿ ಏಕೆ ಬೆಂಚ್ ಕಾಯಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
ಟೀಂ ಇಂಡಿಯಾ ರನ್ ಮಷಿನ್ ಖ್ಯಾತಿ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ರನ್ಗಳಿಕೆ ಮಾಡಲು ಹರಸಾಹಸ ಪಡುತ್ತಿದ್ದಾರೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇನ್ನೂ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲೂ ಕೇವಲ 11ಹಾಗೂ 20 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರ ವಿರುದ್ಧ ಟೀಕೆಗಳು ಕೇಳಿ ಬರಲು ಶುರುವಾಗಿವೆ.
ಇದನ್ನೂ ಓದಿರಿ: ಭಾರತ-ಇಂಗ್ಲೆಂಡ್ ಎರಡನೇ ಟಿ20 ಪಂದ್ಯ: ತಂಡದಲ್ಲಿ ಕೊಹ್ಲಿ, ಪಂತ್ಗಾಗಿ ಯಾರ ಸ್ಥಾನ ತೆರವು?
ಬ್ಯಾಟಿಂಗ್ನಲ್ಲಿ ಅಬ್ಬರಿಸಿರುವ ವಿರಾಟ್ ಕೊಹ್ಲಿ ಸದ್ಯ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಸದ್ಯ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರನ್ನ ಪ್ಲೇಯಿಂಗ್ XI ತಂಡದಿಂದ ಕೈಬಿಡಲು ಸಾಧ್ಯವಿಲ್ಲ ಎಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೋಸ್ಕರ ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ. ಇದರಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ವಿಂಡೀಸ್ ಸರಣಿಯಿಂದ ವಿರಾಟ್ ಕೊಹ್ಲಿ ಅವರನ್ನ ಕೈಬಿಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದು ಎರಡನೇ ಟಿ-20 ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿದ್ದು, ಅವರಿಗೋಸ್ಕರ ದೀಪಕ್ ಹೂಡಾ ಅಥವಾ ಇಶಾನ್ ಕಿಶನ್ ತಮ್ಮ ಸ್ಥಾನ ಬಿಟ್ಟುಕೊಡಲಿದ್ದಾರೆ. ಈ ಪಂದ್ಯದಲ್ಲಿ ಅವರು ಯಾವ ರೀತಿಯ ಪ್ರದರ್ಶನ ನೀಡುತ್ತಾರೆಂಬುದರ ಮೇಲೆ ಅವರ ಮುಂದಿನ ಭವಿಷ್ಯ ನಿಂತಿದೆ.