ನವದೆಹಲಿ: ವನಿತೆಯರ ಚುಟುಕು ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಮಹಿಳಾ ಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ಗಾಗಿ ಹತ್ತು ತಂಡಗಳು ದಕ್ಷಿಣ ಆಫ್ರಿಕಾ ಪಿಚ್ಗಳಲ್ಲಿ ಸೆಣಸಾಟ ನಡೆಸಲಿದೆ. ಮೊದಲ ಪಂದ್ಯ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿದೆ. ಫೆಬ್ರವರಿ 10 ರಿಂದ ಆರಂಭವಾಗುವ ವಿಶ್ವಕಪ್ 17 ದಿನ ನಡೆಯಲಿದ್ದು, ಫೈನಲ್ ಪಂದ್ಯ ಫೆಬ್ರವರಿ 26 ರಂದು ಆಯೋಜಿಸಲಾಗಿದೆ.
ಎರಡು ಗುಂಪುಗಳಾಗಿ ವಿಂಗಡಣೆ: ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ , ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜೊತೆಗೆ ಆಸ್ಟ್ರೇಲಿಯಾ ಎ ಗುಂಪಿನಲ್ಲಿದೆ. ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಇದೆ.
15 ವರ್ಷಗಳಿಂದ ಆಯೋಜನೆ ಗೊಳ್ಳುತ್ತಿರುವ ವನಿತೆಯರ ವಿಶ್ವಕಪ್‌ನಲ್ಲಿ ಮೂರು ರಾಷ್ಟ್ರಗಳು ಮಾತ್ರ ಕಪ್ ಗೆದ್ದುಕೊಂಡಿದೆ. ಅದರಲ್ಲಿ ಆಸ್ಟ್ರೇಲಿಯಾದ ವನಿತೆಯರ ಪ್ರಾಬಲ್ಯ ಹೆಚ್ಚಿದೆ. ಇದುವರೆಗೂ ಕಾಂಗರೂ ನಾಡಿನ ಮಹಿಳಾ ಕ್ರಿಕೆಟಿಗರು ಐದು (2010, 2012, 2014, 2018, 2020) ಬಾರಿ ಟಿ-20 ವಿಶ್ವಕಪ್ ಚಾಂಪಿಯನ್ ಆಗಿದ್ದಾರೆ. ಇಂಗ್ಲೆಂಡ್ (2009) ಮತ್ತು ವೆಸ್ಟ್ ಇಂಡೀಸ್ (2016) ತಲಾ ಒಂದು ಬಾರಿ ಚಾಂಪಿಯನ್ ಆಗಿವೆ. 15 ವರ್ಷಗಳಿಂದ ಚಾಪಿಯನ್ ಪಟ್ಟಕ್ಕಾಗಿ ಭಾರತೀಯ ವನಿತೆಯರು ಸೆಣಸುತ್ತಿದ್ದು ಗೆಲುವು ದಾಖಲಿಸಲಾಗಿಲ್ಲ. 2016ರಲ್ಲಿ ಭಾರತದಲ್ಲಿ ಆಯೋಜಿಸಲಾಗಿದ್ದರೂ ಗೆಲುವು ವೆಸ್ಟ್ ಇಂಡೀಸ್ ವನಿತೆಯರದ್ದಾಗಿತ್ತು. ಮೊದಲ ಆವೃತ್ತಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿತು.
ವಿಶ್ವದ 50 ಕ್ಕೂ ಹೆಚ್ಚು ದೇಶಗಳಲ್ಲಿ ಮಹಿಳಾ ಕ್ರಿಕೆಟ್ ತಂಡಗಳಿವೆ. ಆದರೆ, ಕೇವಲ 10 ದೇಶಗಳು ಮಾತ್ರ ವಿಶ್ವಕಪ್‌ಗೆ ಸ್ಪರ್ಧೆಗೆ ಅರ್ಹತೆ ಪಡೆದಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ಐಸಿಸಿಯ ಮೊದಲ ಹತ್ತು ಶ್ರೇಯಾಂಕಗಳಲ್ಲಿವೆ. ಆಸ್ಟ್ರೇಲಿಯಾ ವನಿತೆಯರ ತಂಡ ವಿಶ್ವದ ನಂಬರ್ 1 ತಂಡವಾಗಿದೆ.
ಭಾರತದ ವನಿತೆಯರು ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 15 ವರ್ಷಗಳಿಂದ ಆಯೋಜಿಸಲಾಗುತ್ತಿದ್ದರೂ ಮಹಿಳೆಯರ ಟಿ20 ವಿಶ್ವಕಪ್‌ನ ಏಳು ಆವೃತ್ತಿಗಳು 2009, 2010, 2012, 2014, 2016, 2018 ಮತ್ತು 2020ರಲ್ಲಿ ಆಯೋಜನೆಗೊಂಡಿದೆ. ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯು 2009 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ನ್ಯೂಜಿಲ್ಯಾಂಡ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ಚಾಂಪಿಯನ್ ಆಯಿತು. 2012ರ ವರೆಗೆ ಎಂಟು ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದವು, 2014ರ ನಂತರ 10ಕ್ಕೆ ಏರಿಕೆ ಮಾಡಲಾಗಿದೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಸಘ್ನಾ ಗಾಯಕ್‌ವಾಡ್ , ಸ್ನೇಹ ರಾಣಾ, ಮೇಘನಾ ಸಿಂಗ್.
ಇದನ್ನೂ ಓದಿ: 'ಅರಿಯದೆ ನಿಷೇಧಿತ ವಸ್ತು ಸೇವಿಸಿದ್ದೆ..': ಜಿಮ್ನಾಸ್ಟ್ ದೀಪಾ ಕರ್ಮಾಕರ್ ತಪ್ಪೊಪ್ಪಿಗೆ