ತೊಡೆಸಂದು ನೋವಿನಿಂದ ಬಳಲುತ್ತಿರುವ ಭಾರತದ ಸ್ಟಾರ್ ಬ್ಯಾಟರ್ ಕೆ.ಎಲ್.ರಾಹುಲ್ ಚಿಕಿತ್ಸೆ ಪಡೆಯಲು ಜರ್ಮನಿಗೆ ತೆರಳಲಿದ್ದು, ಜೂನ್ 1ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಕೆ.ಎಲ್.ರಾಹುಲ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಕಳುಹಿಸಲಾಗುವುದು. ಈ ತಿಂಗಳ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಅವರು ಜರ್ಮನಿಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಆಟಗಾರರ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ನೀಡಲಾಗುವುದು. ತೊಡೆಸಂದು ನೋವು ಅವರನ್ನು ಪದೇ ಪದೇ ಕಾಡುತ್ತಿರುವ ಕಾರಣ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ರಾಹುಲ್ ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ವಿದೇಶಕ್ಕೆ ಚಿಕಿತ್ಸೆಗೆ ತೆರಳುತ್ತಿರುವ ಕಾರಣ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಭಾರತ ಜುಲೈ 1 ರಿಂದ 5 ರವರೆಗೆ ಮರುನಿಗದಿಯಾದ ಏಕೈಕ ಟೆಸ್ಟ್ ಮತ್ತು ಮೂರು ಟಿ20, ಏಕದಿನ ಪಂದ್ಯಗಳನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಲಿದೆ.
ರಾಹುಲ್ ಬದಲಿಗೆ ಮಯಾಂಕ್?: ಗಾಯದಿಂದಾಗಿ ಇಂಗ್ಲೆಂಡ್ ಟಿ20, ಏಕದಿನ ಸರಣಿಯಲ್ಲಿ ಪಾಲ್ಗೊಳ್ಳದ ಕಾರಣ ರಾಹುಲ್ ಬದಲಾಗಿ ಮಯಾಂಕ್ ಅಗರ್ವಾಲ್ಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನು ಏಕೈಕ ಟೆಸ್ಟ್ ಪಂದ್ಯಕ್ಕೆ ಹೆಚ್ಚುವರಿ ಆಟಗಾರರನ್ನು ಪರಿಗಣಿಸಬೇಕೇ? ಬೇಡವೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ.
ಇದನ್ನೂ ಓದಿ: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯಾ ನಾಯಕ: ಬಿಸಿಸಿಐ